ಸಿ.ಸಿದ್ದರಾಜು ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿಆಧುನಿಕ ಯುಗದಲ್ಲಿಯೂ ವೈದ್ಯಕೀಯ ಲೋಕಕ್ಕೆ ಸವಾಲು ಎಂಬಂತೆ ಚರ್ಮದ ರೋಗ ನಿವಾರಣೆಗೆ ಆರಾಧ್ಯ ದೈವ ಎನಿಸಿಕೊಂಡಿರುವ ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 16ರಿಂದ 21ರವರೆಗೆ ನಡೆಯಲಿದ್ದು, ಮಾ.20 ರಂದು ರಥೋತ್ಸವ ನಡೆಯಲಿದೆ.
ತಾಲೂಕಿನ ಕಂದೇಗಾಲ, ಕಲ್ಲುವೀರನಹಳ್ಳಿ, ಮೊಳೆದೊಡ್ಡಿ, ಅಮೃತೇಶ್ವರನಹಳ್ಳಿ ಗ್ರಾಮಗಳ ಮಧ್ಯ ನೆಲೆಸಿರುವ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನವು ಚರ್ಮದ ರೋಗ ನಿವಾರಕಕ್ಕೆ ಆರಾಧ್ಯ ದೈವ ಎನಿಸಿಕೊಂಡಿದ್ದು, ನಾಡಿನ ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರಿಗೆ ಪ್ರಿಯವಾಗಿದೆ.ಮೈಮೇಲೆ ಚರ್ಮದ ಕಾಯಿಲೆ ಕಂಡು ಬಂದ ಕೂಡಲೇ ಮೊದಲು ಮತ್ತಿತಾಳೇಶ್ವರ ದೇವರಿಗೆ ಹೋಗು ಎನ್ನುವ ವಾಡಿಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತಿತಾಳೇಶ್ವರಸ್ವಾಮಿ ದೇವರಿಗೆ ಸೇರುತ್ತದೆ. ದೇವಸ್ಥಾನದ ಆವರಣದಲ್ಲಿನ ಕೊಳದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿಯೇ ಸಿಗುವ ಹುತ್ತದ ಮಣ್ಣು ಹಾಗೂ ಮತ್ತಿ ಮರದ ಚಕ್ಕೆಯ ಪುಡಿಯನ್ನು ಚರ್ಮದ ಲೇಪನ ಮಾಡಿದರೇ ಎಂತಹ ಚರ್ಮದ ಸಮಸ್ಯೆಯೂ ವಾಸಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾ.16 ರಿಂದ 21ರವರೆಗೆ 6 ದಿನಗಳ ಕಾಲ ನಡೆಯುವ ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಮಾರ್ಚ್ 16ರಂದು ಹಸ್ತನಕ್ಷತ್ರ ಪೂರ್ವಕ ಮೃತ್ತಿಕ ಸಂಗ್ರಹಣ, ಅಂಕುರಾರ್ಪಣ ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ಮಾ.17ರಂದು ಪೂರ್ಣಿಮೆ ಸೋಮವಾರ ಚಿತ್ತ ನಕ್ಷತ್ರ ಪೂರ್ವಕ ಚಂದ್ರ ಮಂಡಲಾರೋಹಣ ಅನಂತ ಪೀಠಾರೋಹಣ ಜರುಗಲಿದೆ.
ಮಾ.18ರಂದು ಚೌತಿ ಮಂಗಳವಾರ ಸ್ವಾತಿ ನಕ್ಷತ್ರ ಪೂರ್ವಕ ಪುಷ್ಪ ಮಂಟಪರೋಹಣ ವೃಷಭಾರೋಹಣ ವಸಂತೋತ್ಸವ ಹಾಗೂ ರಾತ್ರಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಾ.19ರಂದು ಪಂಚಮಿ ಬುಧವಾರ ವಿಶಾಖ ನಕ್ಷತ್ರ ಪೂರ್ವಕ ಗಜಾರೋಹಣ ಹಾಗೂ ಮಾ.21ರಂದು ನಕ್ಷತ್ರ ಆಶ್ವಾರೋಹಣ ಮತ್ತ ಅವಭ್ಯತ ತೀರ್ಥಸ್ನಾನ (ತೆಪ್ಪೋತ್ಸವ) ಹಾಗೂ ಶ್ರೀಮಂಟೇಸ್ವಾಮಿ ಬಸವನ ಉತ್ಸವ ನಡೆಯಲಿದೆ.ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಮತ್ತಿತಾಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಮಾ.20ರಂದು ಮಧ್ಯಾಹ್ನ 12:30ರಿಂದ 1:30ರೊಳಗೆ ಶುಭ ಮಿಥುನ ಲಗ್ನದಲ್ಲಿ ಮಠದ ಹೊನ್ನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಮಠದ ಬಸವಪ್ಪ ಹಾಗೂ ಕಂಡಾಯ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ದನಗಳ ಜಾತ್ರೆಗೆ ಚಾಲನೆ:ಜಾತ್ರೆ ಹಿನ್ನೆಲೆಯಲ್ಲಿ ಈಗಾಗಲೇ ದನಗಳ ಜಾತ್ರೆಗೆ ಚಾಲನೆ ನೀಡಲಾಗಿದ್ದು, ಮಾ.18ರವರೆಗೆ ಭಾರಿ ದನಗಳ ಜಾತ್ರೆ ನಡೆಯಲಿದೆ. ಸುತ್ತಮುತ್ತಲಿನ ಹಲವು ಜಿಲ್ಲೆಗಳ ನೂರಾರು ರೈತರು ತಮ್ಮ ದನಗಳನ್ನು ಈ ಜಾತ್ರೆಯಲ್ಲಿ ಕಟ್ಟುತ್ತಾರೆ. ಜಾತ್ರೆಗೆ ಆಗಮಿಸುವ ಉತ್ತಮ ರಾಸುವಿಗೆ ಪ್ರಥಮ ಬಹುಮಾನ 20 ಗ್ರಾಂ ಬೆಳ್ಳಿ, ದ್ವಿತೀಯ ಬಹುಮಾನ 15 ಗ್ರಾಂ ಬೆಳ್ಳಿ ಹಾಗೂ ತೃತೀಯ ಬಹುಮಾನವಾಗಿ 10 ಗ್ರಾಂ ಬೆಳ್ಳಿಯನ್ನು ನೀಡುವುದಾಗಿ ಆಯೋಜಕರು ತಿಳಿಸಿದ್ದಾರೆ.
ಪೌರಾಣಿಕ ನಾಟಕ ಪ್ರದರ್ಶನ:ಮಾ.20ರಂದು ರಾತ್ರಿ ಕಂದೇಗಾಲದ ಶ್ರೀ ಮತ್ತಿತಾಳೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶನಿಪ್ರಭಾವ ಅಥವಾ ರಾಜವಿಕ್ರಮ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ನಡೆಯಲಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಹರಕೆವೊತ್ತ ಭಕ್ತರಿಂದ ಅನ್ನಸಂತರ್ಪಣೆ ನಡೆಯಲಿದೆ. ತಾಲೂಕು ಆಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮೂಲ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.