ಗಾಂಧಿನಗರದಲ್ಲಿ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ ತಿಪಟೂರುಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಸಮರ್ಪಕ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಗಾಂಧಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಹಾಗೂ ಇಲಾಖೆಯಿಂದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿಯ ೫೦ ಶಾಲೆಗಳು ಮಂಜೂರಾಗಿದ್ದು, ನಮ್ಮ ತಾಲೂಕಿನಲ್ಲಿ ಪ್ರಥಮವಾಗಿ ಅಲ್ಪಸಂಖ್ಯಾತ ಪ್ರದೇಶವಾದ ಗಾಂಧಿನಗರದಲ್ಲಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ಶಾಲೆ 6ನೇ ತರಗತಿಯಿಂದ ಪ್ರಾರಂಭವಾಗಲಿದ್ದು, ಕನಿಷ್ಠ 60 ಮಕ್ಕಳನ್ನು ದಾಖಲಿಸುವ ಜವಾಬ್ದಾರಿ ಇಲ್ಲಿನ ಶಿಕ್ಷಕರು ಹಾಗೂ ಸ್ಥಳೀಯ ಮುಖಂಡರುಗಳದ್ದಾಗಿದೆ. ಪೋಷಕರು ಆಂಗ್ಲ ಮಾಧ್ಯಮ ಶಾಲೆಯ ಕಡೆ ಒಲವು ಬೆಳೆಸಿಕೊಂಡು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಸೇರಿಸುತ್ತಿರುವ ಕಾರಣ ಸರ್ಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಯುಗವಾಗಿರುವ ಕಾರಣ ಮಕ್ಕಳು ಮಾತೃ ಭಾಷೆ ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯೂ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಯಾವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ೭೫ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರೆ ಅಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಬೇಕೆಂಬ ಚಿಂತನೆ ನಡೆದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಮಾತನಾಡಿ, ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಅವಶ್ಯಕವಾಗಿರುವ ಕಾರಣ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಮೌಲಾನಾ ಆಜಾದ್ ಶಾಲೆಗಳನ್ನು ಪ್ರಾರಂಭಿಸುತ್ತಿದ್ದು ಇಲ್ಲಿಯೂ ಸಹ ಸರ್ಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ರಾಜ್ಯದ 50 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ತಿಪಟೂರಿನ ಶಾಲೆಯೂ ಒಂದಾಗಿರುವುದು ಸಂತಸದ ವಿಷಯ. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸಮಪರ್ಕವಾಗಿ ಬಳಸಿಕೊಂಡು ಶಾಲೆಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದರು.
ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಮೆಹಬೂಬಿನ್ ಮಾತನಾಡಿ, ಈ ಶಾಲೆಯು 60 ಮಕ್ಕಳ ಸಂಖ್ಯಾಬಲ ಹೊಂದಿದ್ದು 6ನೇ ತರಗತಿಯಿಂದ ಪ್ರಾರಂಭಿಸಲಾಗುತ್ತದೆ. ದಾಖಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.75, ಇತರೆ ಶೇ.25ರಷ್ಟು ಇರಲಿದೆ. ಹೆಣ್ಣು ಮಕ್ಕಳಿಗೆ ಶೇ.50ರಷ್ಟು ಸ್ಥಾನ ಮೀಸಲಿರಿಸಲಾಗಿದೆ. ಈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ನೋಟ್‌ಬುಕ್, ಲೇಖನ ಸಾಮಗ್ರಿ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ ಸೇರಿದಂತೆ ಪ್ರಯೋಗಶಾಲೆ, ಭೋದನಾ ಸಲಕರಣೆಗಳನ್ನು ಇಲಾಖೆ ಪರವಾಗಿ ಒದಗಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸೊಪ್ಪು ಗಣೇಶ್, ಆಸಿಫಾಬಾನು, ಲೋಕನಾಥ್‌ಸಿಂಗ್, ಮಹಮ್ಮದ್‌ಗೌಸ್, ಮಾಜಿ ಸದಸ್ಯ ನಾಸಿರ್‌ಖಾನ್, ಬಿಆರ್‌ಸಿ ದಕ್ಷಿಣಮೂರ್ತಿ, ಆಶಾ, ಕನ್ನಡ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನಂದೀಶ್, ಶಿಕ್ಷಕರಾದ ಪಂಚಾಕ್ಷರಿ, ಯಶ್ವಂತ್ ಮತ್ತಿತರರಿದ್ದರು.