ಮೌನವೃತಾಚರಣೆ, ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ

KannadaprabhaNewsNetwork |  
Published : Oct 11, 2024, 11:45 PM ISTUpdated : Oct 11, 2024, 11:46 PM IST
ಜಕ್ಕಲಿ ಗ್ರಾಮದ ಮಂಟಯ್ಯನವರ ಮಠದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಮಹಿಳೆಯರು, ಮಕ್ಕಳು ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಹಣ್ಣು-ಹಂಪಲಗಳೊಂದಿಗೆ ಸಿಹಿ ನೈವೇದ್ಯ ತೆಗೆದುಕೊಂಡು ಗ್ರಾಮದಲ್ಲಿರುವ ಬನ್ನಿ ಮರಕ್ಕೆ ಯಾರೊಂದಿಗೂ ಮಾತನಾಡದೆ ಹೋಗಿ ವಿಶೇಷವಾದ ಪೂಜೆ ಸಲ್ಲಿಸಿರುವುದು ಹಲವಾರು ಕಡೆ ಕಂಡು ಬಂದಿತು

ನರೇಗಲ್ಲ: ನವರಾತ್ರಿ ಹಬ್ಬ ಬಂತೆಂದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮವೋ ಮನೆ ಮಾಡಿರುತ್ತದೆ. ಈ ನವರಾತ್ರಿ ಹಬ್ಬವು ಕಳೆದ ಅ. 3 ರಿಂದ ಆರಂಭವಾಗಿದ್ದು 9 ದಿನಗಳವರೆಗೆ ಎಲ್ಲೆಡೆ ನಡೆಯುತ್ತಾ ಇದೆ. ಈ ಹಬ್ಬದ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ವಿವಿಧ ಓಣಿಯ ಮಹಿಳೆಯರು, ಯುವತಿಯರು, ಮಕ್ಕಳು ಮಂಟಯ್ಯನವರ ಮಠದಲ್ಲಿರುವ ಬನ್ನಿ ವೃಕ್ಷಕ್ಕೆ ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತಾಚರಣಿಯಿಂದ 7ನೇ ದಿನವಾದ ಗುರುವಾರ ಒಬ್ಬಬ್ಬರಾಗಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ನರೇಗಲ್ಲ ಹೋಬಳಿಯಾದಂತ ಅಲ್ಲಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು, ಮಕ್ಕಳು ಸೇರಿದಂತೆ ವಿವಿಧ ಊರುಗಳಲ್ಲಿರುವ ಬನ್ನಿ ಮಹಾಕಾಳಿಗೆ ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ಅಶ್ವೀಜ ಮಾಸದ ಸೂರ್ಯದಯದ ಪೂರ್ವದಲ್ಲಿ ಅಂದರೆ ನಸುಕಿನ 4 ಗಂಟೆಯ ವೇಳೆಯಲ್ಲಿ ಮಹಿಳೆಯರು ಪ್ರತಿದಿನ ಬಹು ಬೇಗ ಎದ್ದು ಕಸಗೂಡಿಸಿ ಮನೆಯಲ್ಲ ತೊಳೆದು, ರಂಗೋಲಿ ಹಾಕಿ ಸ್ನಾನ ಮಾಡಿ ಮಡಿವಂತಿಕೆಯಿಂದ ಮನೆ ದೇವರಿಗೆ ದೀಪ ಹಚ್ಚಿ ಗುಂಪು-ಗುಂಪಾಗಿ ಕೈಯಲ್ಲಿ ಪೂಜಾ ಸಾಮಾನುಗಳಾದ ಹೂ-ಕಾಯಿ, ಅರಿ಼ಷಣ-ಕುಂಕುಮಾ, ವಿಭೂತಿ, ಧೂಪ, ಉದಬತ್ತಿ, ಹಣ್ಣು-ಹಂಪಲಗಳೊಂದಿಗೆ ಸಿಹಿ ನೈವೇದ್ಯ ತೆಗೆದುಕೊಂಡು ಗ್ರಾಮದಲ್ಲಿರುವ ಬನ್ನಿ ಮರಕ್ಕೆ ಯಾರೊಂದಿಗೂ ಮಾತನಾಡದೆ ಹೋಗಿ ವಿಶೇಷವಾದ ಪೂಜೆ ಸಲ್ಲಿಸಿರುವುದು ಹಲವಾರು ಕಡೆ ಕಂಡು ಬಂದಿತು.

ಈ ವೇಳೆಯಲ್ಲಿ ಅವರ ಅಕ್ಕಪಕ್ಕದಲ್ಲಿ ಜನರಿದ್ದರೂ ಒಬ್ಬರಿಗೊಬ್ಬರು ಪರಸ್ಪರ ಮಾತನಾಡದೆ ಕತ್ತಲಲ್ಲಿ ಮೌನವಾಗಿಯೆ ಹೆಜ್ಜೆ ಹಾಕಿ ಬನ್ನಿಮರಕ್ಕೆ ತೆರಳಿದ್ದ ಮಹಿಳೆಯರು ಪೂಜೆ ಸಲ್ಲಿಸಿದ ಬಳಿಕ ತಮ್ಮ ಇಷ್ಟಾರ್ಥ ಹರಕೆ ಬೇಗನೆ ನೆರವೇರಿಸು ಎಂದು ಬನ್ನಿ ಮಹಾಕಾಳಿ ದೇವತೆಯ ವೃಕ್ಷಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಬೇಡಿಕೊಂಡರು. ಪೂಜೆ ಮುಗಿಸಿಕೊಂಡು ಮನೆಗೆ ಮರಳಿದ ಬಳಿಕವೇ ಮೌನ ಬಿಟ್ಟು ಮಾತನಾಡಿದರು.

ನವರಾತ್ರಿ ಈ ಹಬ್ಬದ ವೇಳೆಯಲ್ಲಿ ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತ ಆಚರಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವುದರಿಂದ ನಮ್ಮ ಕಷ್ಟಗಳು ಬಹು ಬೇಗ ನಿವಾರಣೆಯಾಗುತ್ತವೆ ಎಂಬ ಬಲವಾದ ನಂಬಿಕೆ, ವಿಶ್ವಾಸದಿಂದ ಆಚರಿಸಲಾಗುತ್ತದೆ ಎಂದು ನಂದಾ ಮೆಣಸಿಗಿ ಚಕ್ರವರ್ತಿ ತಿಳಿಸಿದರು.

ಈ ವೇಳೆಯಲ್ಲಿ ಮಹಿಳೆಯರಾದ ಗೌರಮ್ಮ ಮಂಟಯ್ಯನವರಮಠ, ರೇಣುಕಾ ಎಸ್. ಕುದರಿ, ಎನ್.ಎಸ್. ಮೆಣಸಗಿ, ಚನ್ನಬಸವ್ವ ಮಡಿವಾಳರ, ಮಂಜವ್ವ ಯಾವಗಲ್ಲ, ಈರವ್ವ ಜೋಗಿ, ರೇಖಾ ಆದಿ, ಲಲಿತಾ ಯಾವಗಲ್ಲ, ಶಿಲ್ಪಾ ಮೆಣಸಗಿ, ಕವಿತಾ ನರೇಗಲ್ಲ, ಬಸವಣ್ಣೇವ್ವ ಸೋಮನಕಟ್ಟಿ, ಕೀರ್ತಿ ಮೆಣಸಗಿ, ಲಕ್ಷ್ಮಿ ಮಡಿವಾಳರ, ಕೃತಿಕಾ ಮೆಣಸಗಿ ಇದ್ದರು.

ಸುಮಾರು ಮೂವತ್ತು ವರ್ಷಗಳ ಹಿಂದೆ ಬೆರಳೆಣಿಯಷ್ಟು ಮಹಿಳೆಯರು ಈ ವೃತಾಚರಣೆ ಮಾಡುತ್ತಿದ್ದರು. ಈಗ ಹೆಚ್ಚಿನ ಸಂಖ್ಯೆಯಲ್ಲಿ ವ್ರತಾಚರಣೆ ದೇವರ ನಾಮಸ್ಮರಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಶಶಿಕಲಾ ನರೇಗಲ್ಲ ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...