ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ರಾಘವೇಂದ್ರ ಭಟ್

KannadaprabhaNewsNetwork |  
Published : Nov 02, 2026, 04:00 AM IST
ಕಾಂತಾವರ | Kannada Prabha

ಸಾರಾಂಶ

ಕನ್ನಡ ಭಾಷೆ ಎನ್ನುವುದಕ್ಕಿಂತ ನಮ್ಮ ಅಸ್ತಿತ್ವವಾಗಿದೆ. ಮಾತೃಭಾಷೆಯ ಪ್ರೀತಿ, ಗೌರವ ಎಂದೆಂದಿಗೂ ಕಾಯ್ದುಕೊಳ್ಳುವುದೇ ನಮ್ಮ ಅದ್ಯತೆಯಾಗಬೇಕು. ಜೀವನದ ಹಾದಿಯನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಪುಸ್ತಕಗಳು ನಮ್ಮಲ್ಲಿ ಶಾಂತಿ, ಸಕಾರಾತ್ಮಕತೆಯನ್ನು ತುಂಬುವ ಮೌನ ಗುರುಗಳಾಗಿವೆ. ಇತಿಹಾಸ ಎನ್ನುವ ಜೀವಂತ ಸೇತುವೆಯಲ್ಲಿ ಪರಂಪರೆಯ ಅಭಿವ್ಯಕ್ತಿಗೆ ಸಾಹಿತ್ಯವೇ ಸಾಧನವಾಗಿದ್ದು ಮಾನವೀಯ ಮೌಲ್ಯಗಳನ್ನೂ ಬೆಳೆಸುತ್ತದೆ. ಹಾಗಾಗಿ ಸಮಾಜದ ಕನ್ನಡಿಯಾಗಿರುವ ಸಾಹಿತ್ಯದ ಶ್ರೀಮಂತಿಕೆಯನ್ನು ನಾವು ಸದಾ ಕಾಯ್ದುಕೊಳ್ಳಬೇಕು. ರಾಜ್ಯೋತ್ಸವ ಎನ್ನುವುದು ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಎಂ.ಡಿ. ಮತ್ತು ಸಿ.ಇ.ಒ ರಾಘವೇಂದ್ರ ಭಟ್ ಹೇಳಿದರು.

ಮೂಡುಬಿದಿರೆ: ಕನ್ನಡ ಭಾಷೆ ಎನ್ನುವುದಕ್ಕಿಂತ ನಮ್ಮ ಅಸ್ತಿತ್ವವಾಗಿದೆ. ಮಾತೃಭಾಷೆಯ ಪ್ರೀತಿ, ಗೌರವ ಎಂದೆಂದಿಗೂ ಕಾಯ್ದುಕೊಳ್ಳುವುದೇ ನಮ್ಮ ಅದ್ಯತೆಯಾಗಬೇಕು. ಜೀವನದ ಹಾದಿಯನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಪುಸ್ತಕಗಳು ನಮ್ಮಲ್ಲಿ ಶಾಂತಿ, ಸಕಾರಾತ್ಮಕತೆಯನ್ನು ತುಂಬುವ ಮೌನ ಗುರುಗಳಾಗಿವೆ. ಇತಿಹಾಸ ಎನ್ನುವ ಜೀವಂತ ಸೇತುವೆಯಲ್ಲಿ ಪರಂಪರೆಯ ಅಭಿವ್ಯಕ್ತಿಗೆ ಸಾಹಿತ್ಯವೇ ಸಾಧನವಾಗಿದ್ದು ಮಾನವೀಯ ಮೌಲ್ಯಗಳನ್ನೂ ಬೆಳೆಸುತ್ತದೆ. ಹಾಗಾಗಿ ಸಮಾಜದ ಕನ್ನಡಿಯಾಗಿರುವ ಸಾಹಿತ್ಯದ ಶ್ರೀಮಂತಿಕೆಯನ್ನು ನಾವು ಸದಾ ಕಾಯ್ದುಕೊಳ್ಳಬೇಕು. ರಾಜ್ಯೋತ್ಸವ ಎನ್ನುವುದು ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಎಂ.ಡಿ. ಮತ್ತು ಸಿ.ಇ.ಒ ರಾಘವೇಂದ್ರ ಭಟ್ ಹೇಳಿದರು.

ಅವರು ರವಿವಾರ ಕಾಂತಾವರದ ಕನ್ನಡ ಸಂಘ ದ ಆವರಣದಲ್ಲಿನ ವಚನ ವೇದಿಕೆಯಲ್ಲಿ ಕನ್ನಡ ಸಂಘದ 51ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ‘ಕಾಂತಾವರ ಉತ್ಸವ – 2026’, ಎಂಟು ದತ್ತಿನಿಧಿಗಳ ಹಾಗೂ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ, ಸಂಘದ ಪ್ರತಿಷ್ಠಿತ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದತ್ತಿ ಪ್ರಶಸ್ತಿ ಪ್ರದಾನ, ನಾಡಿಗೆ ನಮಸ್ಕಾರ:

ಕನ್ನಡ ಸಂಘದ 51ನೇ ವಾರ್ಷಿಕ ಸಂಭ್ರಮದ ಹಿನ್ನೆಲೆಯಲ್ಲಿ ಉಡುಪಿಯ ಪ್ರಸಿದ್ಧ ಅಸ್ಥಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಭಾಸ್ಕರಾನಂದ ಕುಮಾರ್ ಏಳು ದತ್ತಿನಿಧಿಗಳ ಹಾಗೂ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ, ಸಂಘದ ಪ್ರತಿಷ್ಠಿತ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಡಾ. ನಾ. ಮೊಗಸಾಲೆಯವರ ನೂತನ ಕಾದಂಬರಿ " ಮೋಕ್ಷ " ವನ್ನು ಅವರು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೈದರು.ಕಾಂತಾವರದ ಕೆ.ಬಿ.ಜಿನರಾಜ ಹೆಗ್ಡೆಯವರ ಪುತ್ರಿ ವಸರಸ್ವತಿ ಬಲ್ಲಾಳ್- ಡಾ. ಸಿ.ಕೆ. ಬಲ್ಲಾಳ್ ದಂಪತಿಯ ದತ್ತಿನಿಧಿಯ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿಯನ್ನು ಉಡುಪಿಯ ಯಕ್ಷಗಾನ ಕಲಾರಂಗ, ಭಾಷಾ ತಜ್ಞ ದಿ. ಡಾ. ಯು.ಪಿ. ಉಪಾಧ್ಯಾಯ ಅವರ ಹೆಸರಿನ ಮಹೋಪಾಧ್ಯಾಯ 2025ರ ಸಾಲಿನ ಪ್ರಶಸ್ತಿಯನ್ನು ಅವರ ಶಿಷ್ಯೆ ಡಾ. ವಾರಿಜಾ ನಿರ್ಬೈಲ್ ಪ್ರಾಯೋಜಕತ್ವದಲ್ಲಿ ವಿಶ್ರಾಂತ ಕುಲಪತಿ ಸಾಹಿತಿ ಡಾ. ಕೆ. ಚಿನ್ನಪ್ಪ ಗೌಡ, ಮತ್ತು 2026ರ ಸಾಲಿನ ಪ್ರಶಸ್ತಿಯನ್ನುಹಂಪಿ ಕನ್ನಡ ವಿವಿಯ ಭಾಷಾ ವಿಕಾಸದ ಡೀನ್ ಪ್ರೊ. ಮಾಧವ ಪೆರಾಜೆ ಅವರಿಗೆ ಮೊಗಸಾಲೆ ದತ್ತಿನಿಧಿಯ ಮೊಗಸಾಲೆ ಸಾಹಿತ್ಯ ಪ್ರಶಸ್ತಿಯನ್ನು ವಿಶ್ರಾಂತ ಪ್ರಾಧ್ಯಾಪಕ ಅಂಕಣಕಾರ ನರೇಂದ್ರ ರೈ ದೇರ್ಲ , ಧಾರವಾಡದ ಪ್ರೊ. ಜಿ.ಎಂ.ಹೆಗಡೆಯವರ ದತ್ತಿನಿಧಿಯ ‘ಅನನ್ಯ ಕಲಾವಿದ ಆದರ್ಶ ಶಿಕ್ಷಕ ಪ್ರಶಸ್ತಿ’ಯನ್ನು ಸುರೇಶ್ ವೆಂಕಟೇಶ್ ಕುಲಕರ್ಣಿ ಹುಬ್ಬಳ್ಳಿ , ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಆಚಾರ್ ಮತ್ತು ವಾಣಿ ಬಿ ಆಚಾರ್ ದಂಪತಿಯ ದತ್ತಿನಿಧಿಯ ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ವಿದ್ವಾನ್ ವಿನಾಯಕ ಚಂದ್ರಶೇಖರ ಭಟ್ಟ ಗಾಳಿಮನೆ , ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಳ ಅವರ ದತ್ತಿನಿಧಿಯ ‘ಕಾಂತಾವರ ಸಾಹಿತ್ಯ ಪ್ರಶಸ್ತಿ’ಯನ್ನು ಡಾ. ಪ್ರಮೀಳಾ ಮಾಧವ ಕಾಸರಗೋಡು ಅವರಿಗೆ, ‘ಸಂಘದ ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಕೆ.ಎಚ್. ವಿಜಯ ಕುಮಾರ್ ಉಡುಪಿ ಅವರಿಗೆ ಪ್ರದಾನ ಮಾಡಲಾಯಿತು. ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂಪಾಯಿ ಹತ್ತು ಸಾವಿರ , ವಾರ್ಷಿಕ ಗೌರವ ಪ್ರಶಸ್ತಿ ಜತೆ ರೂ ಐದು ಸಾವಿರ ನಗದು ಪುರಸ್ಕಾರ ಹಾಗೂ ಎಲ್ಲರಿಗೂ ತಾಮ್ರ ಪತ್ರ ಗೌರವದೊಂದಿಗೆ ಸಮ್ಮಾನಿಸಲಾಯಿತು.

ಮತ್ತೆ ನಾಡಿಗೆ ನಮಸ್ಕಾರ: ಸಮಾರಂಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಡಿಕರ್ನಾಟಕ ಬ್ಯಾಂಕಿನ ಪರಿವರ್ತನೆಯ ಹರಿಕಾರ: ಡಾ. ಮಹಾಬಲೇಶ್ವರ ಎಂ.ಎಸ್. (ಲೇಖಕರು: ಶ್ರೀಮತಿ ಸವಿತಾ ಶಾಂತ್‌ಪ್ರಿಯ) ಮಣಿಪಾಲದ ‘ಹಸ್ತಶಿಲ್ಪ’ದ ಶಿಲ್ಪಿ: ಶ್ರೀ ವಿಜಯನಾಥ ಶೇಣೈ (ಲೇಖಕರು: ಶ್ರೀ ನಿತ್ಯಾನಂದ ಪಡ್ರೆ) ಕೈಗಾರಿಕಾ ಕ್ರಾಂತಿಗೆ ಕಾಂತಾವರದ ಕೊಡುಗೆ: ಡಾ. ಕಾಂತಾವರ ಶ್ಯಾಮಸುಂದರ್ (ಲೇಖಕರು: ಶ್ರೀ ಶ್ರೀಪತಿ ಮಂಜನಬೈಲು) ಪ್ರಸಿದ್ಧ ನ್ಯಾಯವಾದಿ, ಸಾಹಿತ್ಯ ಸಂಘಟಕ ಶ್ರೀ ಎ.ಎಸ್.ಎನ್. ಹೆಬ್ಬಾರ್ (ಲೇಖಕರು: ಶ್ರೀ ನೀಲಾವರ ಸುರೇಂದ್ರ ಅಡಿಗ) ಸವ್ಯಸಾಚಿ ಸಾಹಿತಿ ಕಾದಂಬರಿಕಾರ ಡಾ. ಬಿ. ಜನಾರ್ದನ ಭಟ್ (ಲೇಖಕರು: ಪ್ರೊ. ಜಿ.ಎನ್. ಉಪಾಧ್ಯ) ಮಾನವೀಯ ಸೇವೆಯ ಮಾಣಿಕ್ಯ ಶ್ರೀ ಆನಂದ್ ಸಿ. ಕುಂದರ್ (ಲೇಖಕರು: ಶ್ರೀ ನರೇಂದ್ರ ಕುಮಾರ್ ಕೋಟ) ಹಾಗೂ ಸಂಸ್ಕೃತಿ ಸಂವರ್ಧನ ಮಾಲೆಯ ಕೃತಿ. ಜೀವನ ಭಾಸ್ಕರ ಮೋಹನ ಭಾಸ್ಕರ ಹೆಗಡೆ (ಲೇಖಕರು: ಶ್ರೀ ರಾಘವೇಂದ್ರ ಬೆಟ್ಟಕೊಪ್ಪ) ದ ಲೋಕಾರ್ಪಣೆ ನೆರವೇರಿತು. ಇದರೊಂದಿಗೆ ಈವರೆಗೆ ಗ್ರಂಥಮಾಲೆಯಡಿ ಲೋಕಾರ್ಪಣೆಯಾದ ಕೃತಿಗಳ ಸಂಖ್ಯೆ 391ಕ್ಕೇರಿದಂತಾಗಿದೆ.

ಉದ್ಯಮಿ ಕೆ. ಶ್ರೀಪತಿ ಭಟ್ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ್ಕಿ ನಿಕಟಪೂರ್ವ ರಾಜಾಧ್ಯಕ್ಷ, ಧರ್ಮದರ್ಶಿಡಾ. ಹರಿಕೃಷ್ಣ ಪುನರೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವ ವೇಗ ಕಳವಳ ಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಾಜ್ಯೋತ್ಸವವನ್ನು ಸಂಭ್ರಮಿಸುವಂತಾಗಿದೆ. ಐದು ತರಗತಿಗಳಿಗೆ ಒಬ್ಬ ಅಧ್ಯಾಪಕನನ್ನು ನೇಮಿಸುವ ಸರಕಾರದ ನೀತಿಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾರಣಾಂತಿಕವಾಗುತ್ತಿದೆ. ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಓದುವವರಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕನ್ನಡ ರಾಜೋತ್ಸವ ನಿತ್ಯೋತ್ಸವವಾಗಬೇಕಾದ ಅನಿವಾರ್ಯತೆಯಿದೆ ಎಂದವರು ಅಭಿಪ್ರಾಯಪಟ್ಟರು.

ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮ್ಮಾನಿತರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ ಸಹಕಾರ್ಯದರ್ಶಿ ಸದಾನಂದ ಪೂಜಾರಿ ವಂದಿಸಿದರು. ಸಂಚಾಲಕಿ ಶ್ರೀಮತಿ ಛಾಯಾಚಂದ್ರಕಾಂತ್, ಉಪಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು, ಕೋಶಾಧಿಕಾರಿ ಸಂಜೀವ ಕೋಟ್ಯಾನ್ ಒಡ್ಯೊಟ್ಟು, ನಿರ್ವಾಹಕಿ ಭಾಗ್ಯಶ್ರೀ ಸಹಿತ ಇತರರು ಉಪಸ್ಥಿತರಿದ್ದು ಸಹಕರಿಸಿದರು. ಕೃತಿಕಾರರು, ಸಾಧಕರು, ಪ್ರಾಯೋಜಕರನ್ನು ಗೌರವಿಸಲಾಯಿತು.ಕನ್ನಡಿಗರನ್ನು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದ ಬೇಂದ್ರೆ!ಕನ್ನಡಿಗರ ಶಕ್ತಿ, ಸಾಧನೆಯ ಕುರಿತು ದ. ರಾ. ಬೇಂದ್ರೆಯವರು ಹಿಂದೊಮ್ಮೆ ಸಮಾರಂಭದಲ್ಲಿ ಹೇಳಿದ್ದ ಮಾತುಗಳ ಮೂಲಕ ಅವರ ಒಡನಾಡಿಯಾಗಿದ್ದ ಸಾಹಿತಿ, ಕಲಾವಿದ ಗದಗ ಮೂಲದ ಸುರೇಶ್ ವೆಂಕಟೇಶ ಕುಲಕರ್ಣಿ ಸಭೆಯಲ್ಲಿ ರೋಮಾಂಚನ ಮೂಡಿಸಿದರು. ಕನ್ನಡಿಗರು ಏನೇ ಮಾಡಿದರೂ ದೊಡ್ಡದಾಗಿಯೇ ಮಾಡುವವರು ಹಂಪಿಯಲ್ಲಿ ಕಲ್ಲುಗಳೂ ಮಾತನಾಡುವಂತೆ ಮಾಡಿದವರು. ಶ್ರವಣ ಬೆಳಗೊಳದ ಗೋಮಟ, ಬೇಲೂರು, ಹಳೆ ಬೀಡು ಹೀಗೆ ಶಿಲೆಗಳಲ್ಲೂ ಜೀವಂತಿಕೆ ತುಂಬಿದವರು ಕನ್ನಡಿಗರು ಎಂದು ವಿವರಿಸಿದಾಗ ಬೇಂದ್ರೆಯವರ ಮಾತಿಗೆ ಭಾರೀ ಚಪ್ಪಾಳೆ ಬಂದಿತ್ತಂತೆ. ಆದರೆ ಮರುಕ್ಷಣವೇ ಬೇಂದ್ರೆ ಹೌದು ಈಗ ಕನ್ನಡಿಗರು ನಿದ್ದೆಯನ್ನೂ ದೊಡ್ಡ ಪ್ರಮಾಣದಲ್ಲೇ ಮಾಡುತ್ತಿದ್ದಾರೆ ಬೇಗ ಎಚ್ಚರಗೊಳ್ಳಬೇಕಾಗಿದೆ ಎಂದು ಕುಟುಕಿದ್ದನ್ನು ಕುಲಕರ್ಣಿ ವಿವರಿಸಿದರು. ತಮ್ಮನ್ನು ಪ್ರಶ್ನಿಸಿದವರೊಬ್ಬರಿಗೆ ಕಣ್ಣು, ಕಿವಿ, ಕೈ, ಕಾಲು, ಕೆನ್ನೆ, ಹೀಗೆ ದೇಹವೆಲ್ಲವೂ ಕನ್ನಡ ಎನ್ನುತ್ತಾ ನಿರರ್ಗಳವಾಗಿ ವಿವರಿಸಿದ್ದನ್ನೂ ಕುಲಕರ್ಣಿ ರಸವತ್ತಾಗಿ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ