ಕಟ್‌ಬೇಲ್ತೂರು ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ
ಉರಿಯುತ್ತಿರುವ ದೀಪದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಾನ್ನಿಧ್ಯದ ಶಕ್ತಿ ಕುಂದದಂತೆ ಕಾಲಕಾಲಕ್ಕೆ ಸೂಕ್ತ ಚೈತನ್ಯ ನೀಡುವ ಕಾರ್ಯಗಳನ್ನು ನಿರ್ವಹಿಸಬೇಕು. ಇದರಿಂದ ಕ್ಷೇತ್ರದಲ್ಲಿ ಶಕ್ತಿ ವೃದ್ಧಿಯಾಗಿ ನಂಬಿದ ಭಕ್ತರಿಗೆ ದೇವರ ಅನುಗ್ರಹವಾಗುತ್ತದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಅವರು ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಟ್ ಬೇಲ್ತೂರಿನಲ್ಲಿ ಇಂತಹ ದೇವತಾ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. ರಕ್ತಚಂದನ ವೃಕ್ಷದ ಸಣ್ಣ ಸಣ್ಣ ವಿಗ್ರಹಗಳನ್ನು ಬೇರೆ ಬೇರೆ ಕಡೆ ನೋಡಬಹುದು. ಆದರೆ ಇಲ್ಲಿರುವ ಬೃಹತ್, ಭವ್ಯವಾದ ರಕ್ತಚಂದನದ ವಿಗ್ರಹ ಬೇರೆಲ್ಲೂ ಇಲ್ಲ. ಹಿಂದಿನ ವಿಗ್ರಹದಂತೆ ಭವ್ಯವಾದ ವಿಗ್ರಹ ನಿರ್ಮಾಣವಾಗಿದೆ ಎಂದರು.
ವೇ.ಮೂ.ಬ್ರಹ್ಮಶ್ರೀ ಕೆ.ಎಸ್ ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ಧಾರ್ಮಿಕ ಉಪನ್ಯಾಸ ನೀಡಿ, ಕಷ್ಟ, ನಷ್ಟ, ರೋಗ ರುಜಿನ, ವ್ಯಥೆ ಮನುಷ್ಯ ಸಹಜವಾದುದು. ಪುಣ್ಯ ಕಾರ್ಯದಿಂದ ಸುಖದ ಅಪೇಕ್ಷೆ ಪಡುತ್ತೇವೆ. ಪುಣ್ಯದ ಫಲವಾಗಿ ಸುಖ ಪ್ರಾಪ್ತವಾಗಬೇಕಾದರೆ ಭಗವಂತನ ಅನುಗ್ರಹ ಅಗತ್ಯ. ಪ್ರಾಮಾಣಿಕತೆ, ಸತ್ಯ, ಧರ್ಮಶ್ರದ್ಧೆ ಅನುಸರಿಸುವುದರಿಂದ ಜನ್ಮ ಸಾರ್ಥಕತೆಯಾಗುತ್ತದೆ ಎಂದರು.ಆಡಳಿತ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ, ಈ ದೈವಸ್ಥಾನ ಪುರಾತನವಾದ ಧಾರ್ಮಿಕ ಹಿನ್ನೆಲೆಯುಳ್ಳ ಕ್ಷೇತ್ರ. ಈ ಹಿಂದೆ ಭದ್ರಮಹಾಕಾಳಿಯ ಮೂರ್ತಿಯನ್ನು ರಕ್ತ ಚಂದನ ಮರದಿಂದಲೇ ನಿರ್ಮಿಸಲಾಗಿದ್ದು, ಇತ್ತೀಚೆಗೆ ಈ ವಿಗ್ರಹವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾದ ಸಂದರ್ಭ ಮೂರು ವರ್ಷಗಳ ಕಾಲ ಸೂಕ್ತವಾದ ರಕ್ತಚಂದನ ಮರಕ್ಕಾಗಿ ಶೋಧ ನಡೆಸಿ ಕೊನೆಗೆ ಶಿವಮೊಗ್ಗದಲ್ಲಿ ರಕ್ತಚಂದನ ಮರ ದೊರಕಿತು. ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯರು ಭದ್ರಮಹಾಕಾಳಿ ದೇವಿಯ ವಿಗ್ರಹವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಆಡಳಿತ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ಹಾಗೂ 25 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಿನಯ ಆಚಾರ್ಯ ಪ್ರಾರ್ಥಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಸೀತಾರಾಮ ಶೆಟ್ಟಿ ಹೆಗ್ಡೆಯವರ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಡಾ.ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಜಗದೀಶ್ ಶೆಟ್ಟಿ ಸಹಕರಿಸಿದರು.