ಶಿವಮೊಗ್ಗ: ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಎಂದಿಗೂ ವಿಶೇಷ ಗೌರವವಿದ್ದು, ಇವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕರಾಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರವಲ್ಲದೇ ಕ್ರೀಡೆ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯವಾಗಿದ್ದು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ದಸರಾ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿಯಿಲ್ಲದ ಕಾರಣ ಎಲ್ಲ ವಯೋಮಾನದವರು ಕ್ರೀಡೆಯಲ್ಲಿ ಭಾಗವಹಿಸಬಹುದು. ಮಕ್ಕಳಿಗೆ ಸ್ಫೂರ್ತಿಯಾಗುವಂತೆ ವಯಸ್ಸಾದವರು ಸ್ಪರ್ಧಿಸುತ್ತಿರುವುದು ಸಂತಸದ ವಿಷಯ ಎಂದರು.
ದಸರಾ ಕ್ರೀಡಾಕೂಟದ ಕುರಿತು ಇನ್ನೂ ಹೆಚ್ಚಿನ ಪ್ರಚಾರ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 5 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳಬೇಕು. ಅವರ ಹವ್ಯಾಸಗಳು ನಮಗೆ ಮಾರ್ಗದರ್ಶನ ಆಗಬೇಕು ಎಂದು ಹೇಳಿದರು.ಬರ್ಲಿನ್ ದೇಶದಲ್ಲಿ ಅಂತಾರಾಷ್ಟ್ರೀಯ ಬಾಲಕರ ಜ್ಯೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾಪಟು ಸುನೀಲ್ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ಅವರ ಸಾಧನೆಯಿಂದಾಗಿ ಅವರನ್ನು ಜನರು ಗುರುತಿಸುತ್ತಿದ್ದಾರೆ. ಅವರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ವೈದ್ಯರಲ್ಲಿ ಹಸಿವು, ಜೀರ್ಣ, ನಿದ್ರೆ, ಸೇರಿದಂತೆ ಎಲ್ಲದಕ್ಕೂ ಮಾತ್ರೆಬೇಕೆಂದು ಕೇಳುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಕಾರಣ ಜೀವನಶೈಲಿಯಾಗಿದ್ದು, ಬೇಗ ಏಳುವುದು, ನಗುವುದು, ಮನೆಯವರ ಜೊತೆ ಒಡನಾಟ, ಉತ್ತಮ ಊಟ, ನಿದ್ರೆ , ಆಟ ಕೂಡ ದೊಡ್ಡ ಔಷಧ ಎಂದು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ವೈದ್ಯರಿಂದ ದೂರ ಇರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ನಡೆಯಬೇಕು. ಒಂದು ಗಂಟೆ ಆಟ ಆಡಿದರೆ ಸುಮಾರು 200 ರಿಂದ 500 ಕ್ಯಾಲರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಉತ್ತಮ ಅಂಕವನ್ನೂ ಗಳಿಸಬಹುದು, ಜೊತೆಗೆ ಟಿವಿ, ಮೊಬೈಲ್‌ನಿಂದ ದೂರ ಇರಲು ಸಾಧ್ಯವಾಗುತ್ತದೆ. ಕ್ರೀಡೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸದೃಢರನ್ನಾಗಿಸುತ್ತದೆ. ಆದ್ದರಿಂದ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ದಸರಾ ಕ್ರೀಡಾಕೂಟಕ್ಕೆ ವಯಸ್ಸಿನ ಮಿತಿ ಇಲ್ಲ. ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟವನ್ನು ನಮ್ಮ ಹಿರಿಯರು ಆರಂಭಿಸಿದ್ದಾರೆ. ಕ್ರೀಡೆಯಿಂದ ನಮ್ಮ ದೇಹದ ಅಂಗಗಳು ಚುರುಕಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ. ದಸರಾ ಕ್ರೀಡಾ ಸಮಿತಿಯವರು ಮುಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಪಂದ್ಯಗಳನ್ನು ಸಹ ಅಳವಡಿಸಿಕೊಳ್ಳಬಹುದೆಂದು ಸಲಹೆ ನೀಡಿದರು.ಎಸ್‌ಸಿ ಎಸ್‌ಟಿ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ನಮ್ಮನ್ನೆಲ್ಲ ಆರೋಗ್ಯವಂತರನ್ನಾಗಿ, ಯುವಕರನ್ನಾಗಿ ಇಡುವ ಶಕ್ತಿ ಕ್ರೀಡೆಗಿದೆ. ಪ್ರಸ್ತುತ ಮಕ್ಕಳನ್ನು ನಾವು ಮೊಬೈಲ್‌ನಿಂದ ದೂರ ಇಡಬೇಕು. ನಾವು ಹಿಂದೆ ಆಡುತ್ತಿದ್ದ ಆಟಗಳಲ್ಲಿ ಈಗಿನ ಮಕ್ಕಳನ್ನು ತೊಡಗಿಸುವ ಪ್ರಯತ್ನ ಮಾಡಬೇಕು. ಹಾಗೂ ಅವರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕು. ಕ್ರೀಡೆಗಳು ಕೇವಲ ಆಟಗಳಲ್ಲ, ಅದೊಂದು ಭಾವೈಕ್ಯತೆ ಮತ್ತು ದೇಶಪ್ರೇಮದ ಪ್ರತೀಕವಾಗಿದೆ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸೊರಬ ತಾಲೂಕಿನ ತಲ್ಲೂರು ಗ್ರಾಮದ ಹಾಕಿ ಕ್ರೀಡಾಪಟು ಸುನೀಲ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಕ್ರೀಡಾಪಟುಗಳು, ಇಲಾಖಾ ಸಿಬ್ಬಂದಿ ಪಾಲ್ಗೊಂಡಿದ್ದರು.