ಅಂಗನವಾಡಿ ಕಟ್ಟಡಗಳ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿ

KannadaprabhaNewsNetwork |  
Published : Jun 13, 2025, 04:13 AM ISTUpdated : Jun 13, 2025, 04:14 AM IST
ಬೆಳಗಾವಿ ಜಿಪಂ ಯೋಜನಾ ನಿರ್ದೇಶಕ ರವಿ ಎನ್‌.ಬಂಗಾರೆಪ್ಪನವರ ಅಂಗನವಾಡಿ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಆಯಾ ತಾಲೂಕಿನ ಸಿಡಿಪಿಒ ನಿರ್ಮಾಣವಾಗುತ್ತಿರುವ ಅಂಗನವಾಡಿಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿ ವಾರದೊಳಗಾಗಿ ವರದಿ ನೀಡಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕುಗಳಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಗಳು ಪೂರ್ಣಗೊಳಿಸದೇ ಹಾಗೇ ಉಳಿದಿರುತ್ತವೆ. ಸಂಬಂಧಿಸಿದ ಆಯಾ ತಾಲೂಕಿನ ಸಿಡಿಪಿಒ ನಿರ್ಮಾಣವಾಗುತ್ತಿರುವ ಅಂಗನವಾಡಿಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿ ವಾರದೊಳಗಾಗಿ ವರದಿ ನೀಡಬೇಕು ಹಾಗೂ ಕೂಡಲೇ ಕಟ್ಟಡಗಳನ್ನು ಪೂರ್ಣಗೊಳಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ರವಿ ಎನ್.ಬಂಗಾರೆಪ್ಪನವರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಅಂಗನವಾಡಿ ಕಟ್ಟಡ ಮತ್ತ ಮೂಲಭೂತ ಸೌಕರ್ಯಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಆ ಕಾಮಗಾರಿಗಳನ್ನು ಬೇಗನೆ ಪ್ರಾರಂಭಿಸಲು ತಿಳಿಸಿದರು.

ಮಳೆಗಾಲ ಪ್ರಾರಂಭವಾಗಿದ್ದರಿಂದ ಪ್ರತಿ ಅಂಗನವಾಡಿಗಳಿಗೆ ಮೇಲ್ವಿಚಾರಕರು ಭೇಟಿ ನೀಡಿ ಪರಿಶೀಲಿಸಿ ಸಿಡಿಪಿಒಗೆ ವರದಿ ನೀಡಬೇಕೆಂದು ತಿಳಿಸಿದರು. ಆರು ವರ್ಷ ತುಂಬಿದ ಮಕ್ಕಳು ಶಾಲೆಗೆ ದಾಖಲಾದ ಬಗ್ಗೆ ವರದಿ ನೀಡುವುದು. ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರ ಇರುವ ಸೌಲಭ್ಯ ಒದಗಿಸುವುದು. ಪ್ರತಿ ತಿಂಗಳು 3ನೇ ಶನಿವಾರ ಪಾಲಕರ/ಪೋಷಕರ ಸಭೆ ಮಾಡಬೇಕು. ಸಭೆ ಕುರಿತು ರಿಜಿಸ್ಟರ್‌ನಲ್ಲಿ ಬರೆದು ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಇರತಕ್ಕದ್ದು. ಅಲ್ಲದೇ ಮಕ್ಕಳಿಗೆ ಕುಡಿವ ನೀರು ಕುದಿಸಿ ಆರಿಸಿ ಕೊಡಬೇಕು. ಸ್ವಚ್ಛವಾದ ವಾತಾವರಣದಿಂದ ಕೂಡಿರಬೇಕು. ಮಕ್ಕಳಿಗೆ ಕೆಮ್ಮು, ಜ್ವರ, ನೆಗಡಿ, ಬಂದರೆ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳುವುದು. ಕೇಂದ್ರಗಳಲ್ಲಿ ಕರೆಂಟ್ ವೈರ್ ಡಿಸ್ಕನೆಕ್ಟ್‌ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಿರ್ದೇಶನ ನೀಡಿದರು. ಮಾತೃ ವಂದನಾ, ಭಾಗ್ಯಲಕ್ಷ್ಮೀ, ಗೃಹಲಕ್ಷ್ಮಿ ಫಲಾನುಭವಿಗಳ ಆಯ್ಕೆ ಮಾಡಿ ವರದಿ ಸಲ್ಲಿಸಲು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜ್ ಆರ್, ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ ಹಾಗೂ ಜಿಲ್ಲೆ ಎಲ್ಲ ತಾಲೂಕಿನ ಸಿಡಿಪಿಒ, ಸಿಬ್ಬಂದಿಯಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ