ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಸದುಪಯೋಗವಾಗಲಿ

KannadaprabhaNewsNetwork | Published : Aug 16, 2024 12:49 AM

ಸಾರಾಂಶ

ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರವು ಅನುಕೂಲವಾಗಲಿದೆ

ಗಜೇಂದ್ರಗಡ: ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಮೂತ್ರಪಿಂಡದ ಆರೈಕೆ ಸಮುದಾಯ ಕೇಂದ್ರದಲ್ಲಿ ಲಭ್ಯವಿದ್ದು, ಅದರ ಸದುಪಯೋಗ ರೋಗಿಗಳು ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸ್ಥಳೀಯ ರೋಣ ರಸ್ತೆಯ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿಯಲ್ಲಿ ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೆಟ್, ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್(ಕಿಡ್ನಿ ಕೇರ್) ಸಹಯೋಗದಲ್ಲಿ ಗುರುವಾರ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರವು ಅನುಕೂಲವಾಗಲಿದೆ. ಆಸ್ಪತ್ರೆಯ ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರು ಸಹ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ರೋಣ ಹಾಗೂ ಗದಗ ಮತ್ತು ಕೊಪ್ಪಳಕ್ಕೆ ಹೋಗಬೇಕಾದ ಪರಿಣಾಮ ರೋಗಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಗಮನ ಸೆಳೆದಾಗ ಪಟ್ಟಣದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ಭರವಸೆ ನೀಡಿದಂತೆ ಇಂದು ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಉದ್ಘಾಟಿಸಲಾಗಿದೆ ಎಂದರು.

ಪಟ್ಟಣದಲ್ಲಿ ಸಮುದಾಯ ಸರ್ಕಾರಿ ಆಸ್ಪತ್ರೆಯನ್ನು ತಾಲೂಕು ಮಟ್ಟದ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಈಗಾಗಲೇ ಸರ್ಕಾರ ಮಟ್ಟದಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಆ ಕಾರ್ಯವು ಸಹ ಕಾರ್ಯಗತವಾಗಲಿದೆ. ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಗಳ ಮೂಲಕ ಆಸ್ಪತ್ರೆಯಲ್ಲಿ ಹೆರಿಗೆ ಸಿಜರಿನ್ ಘಟಕ ಆರಂಭಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಇಲ್ಲಿ ಸೇವೆ ಸಲ್ಲಿಸುವ ವೈದ್ಯಾಧಿಕಾರಿಗಳು ಸಮಾಜದ ಆಸ್ತಿಯಾಗಿದ್ದಾರೆ. ಆಸ್ಪತ್ರೆಯ ಸದ್ಭಳಿಕೆ, ವಿಶ್ವಾಸದಿಂದ ವೈದ್ಯರ ಸೇವೆ ಪಡೆದುಕೊಳ್ಳಬೇಕಿದೆ. ಹೀಗಾಗಿ ಸಾರ್ವಜನಿಕರ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳ ಸಹಕಾರವು ಮುಖ್ಯವಾಗಿದೆ ಎಂದರು.

ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾದ ರಾಜು ಸಾಂಗ್ಲೀಕರ, ಶರಣಪ್ಪ ಚಳಗೇರಿ ಮಾತನಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳು ವಾರದಲ್ಲಿ ೨/೩ ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕು. ಆದರೆ ಪಟ್ಟಣದಲ್ಲಿ ಡಯಾಲಿಸಿಸ್ ಚಿಕಿತ್ಸಾ ಕೇಂದ್ರವಿಲ್ಲದರಿಂದ ರೋಗಿಗಳು ಗದಗ, ರೋಣ, ಕೊಪ್ಪಳ ಹಾಗೂ ಹುಬ್ಬಳ್ಳಿಗೆ ತೆರಳಬೇಕಾಗಿತ್ತು. ರೋಗಿಗಳ ಕಷ್ಟ ಅರಿತ ಶಾಸಕ ಜಿ.ಎಸ್. ಪಾಟೀಲ ಪಟ್ಟಣದಲ್ಲಿ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಆರಂಭಿಸಿ ಬಡರೋಗಿಗಳಿಗೆ ನೆರವಾಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಡಯಾಲಿಸಿಸ್ ಕೇಂದ್ರದ ಆಡಳಿತಾಧಿಕಾರಿ ಶಿದ್ಧಲಿಂಗೇಶ್ವರ ಶಿವಶಿಂಪಿಗೇರ ಮಾತನಾಡಿ, ೨ ಬೆಡ್‌ಗಳ ಅತ್ಯಾಧುನಿಕ ಯಂತ್ರೋಪಕರಣಗಳ ಕೇಂದ್ರವಾಗಿದೆ, ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಕಾರ್ಯನಿರ್ವಹಿಸುವ ಕೇಂದ್ರದಲ್ಲಿ ಓರ್ವ ರೋಗಿಯ ಡಯಾಲಿಸಿಸ್ ಮಾಡಲು ಕನಿಷ್ಠ ೪ ಗಂಟೆಗಳ ಸಮಯಾವಕಾಶ ಬೇಕಾಗಿದ್ದರಿಂದ ದಿನಕ್ಕೆ ೪ ರೋಗಿಗಳ ಡಯಾಲಿಸಿಸ್ ಮಾಡಲಾಗುವುದು ಎಂದರು.

ಡಾ. ಅನೀಲಕುಮಾರ ತೋಟದ, ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ, ಮುಖಂಡರಾದ ಸಿದ್ದಪ್ಪ ಬಂಡಿ, ಅಶೋಕ ಬಾಗಮಾರ, ವೀರಣ್ಣ ಶೆಟ್ಟರ, ರಫೀಕ್ ತೋರಗಲ್, ಸುರೇಂದ್ರಸಾ ರಾಯಬಾಗಿ, ಶ್ರೀಧರ ಬಿದರಳ್ಳಿ, ಬಸವರಾಜ ಹೂಗಾರ, ಯಲ್ಲಪ್ಪ ಬಂಕದ, ಎಫ್.ಎಸ್. ಕರಿದುರಗನವರ, ಉಮೇಶ ರಾಠೋಡ, ಸಿದ್ದು ಗೊಂಗಡೆಶೆಟ್ಟಿಮಠ ಸೇರಿ ಇತರರು ಇದ್ದರು.

Share this article