ಲಕ್ಷ್ಮೇಶ್ವರ: ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ನಡೆಯುವ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಪೊಟೋ ಪ್ರತಿ ಹಾಗೂ ಮಂತ್ರಾಕ್ಷತೆಯನ್ನು ಪ್ರತಿ ಮನೆಗೆ ತಲುಪಿಸುವ ಪೂರ್ವದಲ್ಲಿ ನಮ್ಮೂರಿನ ದೈವ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ, ಶ್ರೀರಾಮನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಭಾನುವಾರ ಸೋಮೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯ ಪೊಟೋ ಪ್ರತಿ ಹಾಗೂ ಮಂತ್ರಾಕ್ಷತೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿ ಹಾಗೂ ನಮ್ಮ ಹಿಂದೂಗಳ ಅಸ್ಮಿತೆಯ ಸಂಕೇತವಾಗಿ ಶ್ರೀ ರಾಮನ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಜ. 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯು ಅಂದು ಬೆಳಗ್ಗೆ 11 ಗಂಟೆಗೆ ನಮ್ಮ ಮನೆಯ ಜಗಲಿಯ ಮೇಲೆ ಅಥವಾ ದೇವರ ಕೋಣೆಯಲ್ಲಿ ಜೋಡಿ ದೀಪ ಹಚ್ಚಿ ಬೆಳಗುವ ಕಾರ್ಯ ಮಾಡಿ ಶ್ರೀರಾಮನ ದೇವಸ್ಥಾನ ಉದ್ಘಾಟನೆ ಉತ್ತಮವಾಗಿ ನಡೆಯಲಿ ಎಂದು ಪ್ರಾರ್ಥಿಸೋಣ, ಶ್ರೀರಾಮನ ಭಾರತದ ಹೆಮ್ಮೆಯ ಸಂಕೇತವಾಗಿದ್ದಾನೆ ಹಾಗೂ ಹಿಂದೂಗಳ ಆರಾಧ್ಯ ದೈವವಾಗಿದ್ದಾನೆ ಎಂದು ಅವರು ಹೇಳಿದರು. ಈ ವೇಳೆ ಗಂಗಾಧರ ಮೆಣಸಿನಕಾಯಿ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಧಾರ್ಮಿಕ ಕೇಂದ್ರವಾಗುತ್ತಿರುವ ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಯನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಅಂದು ನಾವೆಲ್ಲ ದೇಶದ ಒಗ್ಗಟ್ಟಿನ ಸಂಕೇತವಾಗಿ ಶ್ರೀರಾಮ ಭಜನೆ ಮಾಡೋಣ ಹಾಗೂ ದೀಪ ಹಚ್ಚಿ ಮನೆಯಲ್ಲಿ ಬೆಳಗುವ ಕಾರ್ಯ ಮಾಡೋಣ, ಅಲ್ಲದೆ ನಮ್ಮ ತಾಲೂಕಿನ ಪ್ರತಿ ಮನೆಗೂ ಶ್ರೀರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಪೊಟೋ ಪ್ರತಿ ಹಾಗೂ ಮಂತ್ರಾಕ್ಷತೆಯನ್ನು ನಮ್ಮ ಶ್ರೀರಾಮ ಕರಸೇವಕರು ತಲುಪಿಸುವ ಕಾರ್ಯ ಮಾಡುತ್ತಾರೆ ಎಂದು ಹೇಳಿದರು. ಈ ವೇಳೆ ದುಂಡೇಶ ಕೊಟಗಿ, ಸಿದ್ದನಗೌಡ ಬೊಳ್ಳೊಳ್ಳಿ, ಬಸವರಾಜ ಮೆಣಸಿನಕಾಯಿ, ಶಿವಾನಂದ ಮೆಕ್ಕಿ, ಅನಿಲ ಮುಳಗುಂದ, ಶಿವಯೋಗಿ ಅಂಕಲಕೋಟಿ, ಅಶೋಕ ಪಾಟೀಲ, ಕಲ್ಲೂರ, ರಾಜಶೇಖರ ಶಿಗ್ಲಿಮಠ, ಅಶ್ವಿನಿ ಅಂಕಲಕೋಟಿ, ರಾಘವೇಂದ್ರ ಪೂಜಾರ್, ನೀಲವ್ವ ಮೆಣಸಿನಕಾಯಿ, ಚಂದ್ರು ಹಂಪಣ್ಣವರ ಸೇರಿದಂತೆ ಅನೇಕರು ಇದ್ದರು.