ಶಿವಮೊಗ್ಗ: ಅಗ್ನಿವಂಶ ಕ್ಷತ್ರಿಯರ ಕುಲ ಪುರುಷರಾದ ಶ್ರೀ ಅಗ್ನಿಬನ್ನಿರಾಯರು ತಿಗಳರ ಸಮುದಾಯದ ಶ್ರೇಷ್ಠ ಗುರುಗಳಾಗಿದ್ದು, ಈ ಸಮಾಜವು ದುಡಿಮೆಗೆ ಹೆಚ್ಚಿನ ಆದ್ಯತೆ ನೀಡುವ ಶ್ರಮಜೀವಿಗಳು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಶ್ಲಾಘಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭೂಮಂಡಲದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದಾಗ ಸಮಸ್ತ ಜೀವ ಸಂಕುಲವನ್ನು ರಕ್ಷಿಸಲು ಸಂದರ್ಭ ಒದಗಿ ಬರುತ್ತದೆ. ಅಂತಹ ಸಮಯದಲ್ಲಿ ಶಂಭು ಮಹರ್ಷಿಗಳು ಸಪ್ತ ಋಷಿಗಳನ್ನು ಸೇರಿಸಿ ಅರ್ಬುದಾಂಚಲ ಪರ್ವತದ ಮೇಲೆ ಯಾಗವನ್ನು ನಡೆಸುತ್ತಾರೆ. ಅಲ್ಲಿಗೆ ಆಗಮಿಸಿದ ತ್ರಿಮೂರ್ತಿಗಳು ಯಾಗಕ್ಕೆ ಕಾಮಧೇನುವಿನ ತುಪ್ಪದಿಂದ ಆಹುತಿಯನ್ನು ನೀಡುತ್ತಾರೆ. ಪರಶಿವನು ತನ್ನ ಮೂರನೇ ಕಣ್ಣಿನಲ್ಲಿ ಮೂಡಿದ ಹನಿಯನ್ನು ಕೆಂದಾವರೆ ಪುಷ್ಪದೊಡನೆ ಯಜ್ಞಕುಂಡಕ್ಕೆ ಅರ್ಪಣೆ ಮಾಡುತ್ತಾನೆ. ಶಿವನ ಈ ಅಂಶದಿಂದ ಮೀನ ಮಾಸ ಉತ್ತರ ನಕ್ಷತ್ರದ ದಿನದಂದು ಪ್ರಜ್ವಲಿಸುವ ಅಗ್ನಿಯಿಂದ ವೀರ ಅಗ್ನಿ ಮಹಾರಾಜರು ಜನಿಸುತ್ತಾರೆ ಎಂದು ತಿಳಿಸಿದರು.
ತಿಗಳರ ಸಮುದಾಯವು ಪುರಾಣದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮಹಾಭಾರತದಲ್ಲಿ ಪಾಂಡವರು ಯುದ್ಧವನ್ನು ಜಯ ಸಾಧಿಸುವಲ್ಲಿ ತಿಗಳರ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ. ತಿಗಳರ ಸಮುದಾಯದ ಸಹಕಾರ ಹಾಗೂ ಬೆಂಬಲವಿಲ್ಲದೆ ಯಾವುದೇ ಯುದ್ಧವನ್ನಾಗಲಿ, ಕಾರ್ಯವನ್ನಾಗಲೀ ಜಯಗೊಳಿಸಲಾಗುವುದಿಲ್ಲ ಎಂಬ ಪ್ರತೀತಿ ಇದೆ ಎಂದ ಅವರು, ತಿಗಳರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಶ್ರಮ ಮತ್ತು ಸ್ನೇಹಜೀವಿಗಳು. ಹಣ ಅಂತಸ್ತಿಗಿಂತ ಕಾಯಕಕ್ಕೆ ಪ್ರಾಮುಖ್ಯತೆ ನೀಡುವ ಸಮಾಜ ಎಂದರು.ಅಗ್ನಿಬನ್ನಿರಾಯ ಸ್ವಾಮಿಯ ಬಗ್ಗೆ ಇನ್ನೂ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಸಮಾಜದ ಮುಖಂಡರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತುಮಕೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ನಿಮ್ಮ ಸಮುದಾಯದ ಇನ್ನಷ್ಟು ಅಭಿವೃದ್ಧಿ ಹೊಂದಲು ಸರ್ಕಾರದಿಂದ ಯೋಜನೆಯನ್ನು ರೂಪಿಸಲು ಮನವಿ ಮಾಡುತ್ತೇನೆ ಎಂದರು.ಸಮಾಜದ ಮುಖಂಡ ಮಹಾದೇವ ಮಾತನಾಡಿ, ಶ್ರೀ ಅಗ್ನಿಬನ್ನಿರಾಯ ಸ್ವಾಮಿಗಳು ಮಹಾಪುರುಷರು. ಈ ಸಮುದಾಯದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಮೈಸೂರು, ಬೆಂಗಳೂರು ಹಾಗೂ ಮಳವಳ್ಳಿ ಭಾಗದಲ್ಲಿ ತಿಗಳರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ತುಮಕೂರಿನಲ್ಲಿ ಸಮಾಜದ ಸಮಾವೇಶ ಆಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರಾದ ನಾಗರಾಜ, ಪದ್ಮಾ, ಚಂದ್ರಕಲಾ ಹಾಗೂ ಸಮಾಜದ ಪ್ರಮುಖರುಗಳು ಪಾಲ್ಗೊಂಡಿದ್ದರು.