ವಿಶ್ವಕರ್ಮರು ತಮ್ಮತನ ಜತೆಗೆ ವಿಶ್ವ ಭ್ರಾತೃತ್ವ ಬೆಳೆಸಿಕೊಳ್ಳಲಿ

KannadaprabhaNewsNetwork |  
Published : Nov 30, 2026, 03:00 AM IST
ಕನ್ನಡ ಪ್ರಭ ಚಿತ್ರ  | Kannada Prabha

ಸಾರಾಂಶ

ವಿಶ್ವಕರ್ಮ ಸಮುದಾಯದ ಬಂಧುಗಳು ತಮ್ಮತನವನ್ನು ಉಳಿಸಿಕೊಂಡು ವಿಶ್ವ ಭ್ರಾತೃತ್ವ ಬೆಳಸಿಕೊಳ್ಳಬೇಕು ಎಂದು ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

- ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ । ಲಕ್ಷ ದೀಪೋತ್ಸವ ಅಂಗವಾಗಿ ಧರ್ಮಸಭೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ವಿಶ್ವಕರ್ಮ ಸಮುದಾಯದ ಬಂಧುಗಳು ತಮ್ಮತನವನ್ನು ಉಳಿಸಿಕೊಂಡು ವಿಶ್ವ ಭ್ರಾತೃತ್ವ ಬೆಳಸಿಕೊಳ್ಳಬೇಕು ಎಂದು ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಶ್ವಕರ್ಮ ಸಮಾಜದಿಂದ ಲಕ್ಷ ದೀಪೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬೇರೆ ಬೇರೆ ಸಮುದಾಯದವರೂ ತಮ್ಮ ಧರ್ಮ, ತತ್ವ- ಸಿದ್ಧಾಂತ, ನಿಷ್ಠೆಗೆ ಮೊದಲು ಆದ್ಯತೆ ನೀಡಿ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ವಿಶ್ವಕರ್ಮರು ವೈದಿಕ ಪರಂಪರೆಯೊಟ್ಟಿಗೆ ಐತಿಹಾಸಿಕ ಕಟ್ಟಡಗಳ ಮೂಲ ವಿನ್ಯಾಸಕಾರರಾಗಿದ್ದರೂ ತಮಗಾಗಿ ಏನನ್ನೂ ಮಾಡಿಕೊಂಡಿಲ್ಲ. ವಿವಿಧ ಹಿಂದೂ ದೇವಾಲಯ, ಜೈನ ಮಂದಿರ, ಬೌದ್ಧ ವಿಹಾರ, ಬಸದಿ ರಥ, ಗೋಪುರ, ಪಾರಂಪರಿಕ ಸುಂದರ ಕಟ್ಟಡಗಳ ಶಿಲ್ಪಿಗಳಾಗಿದ್ದಾರೆ. ಇಂಥ ವಿಶ್ವಕರ್ಮರು ತಮ್ಮ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದಾರೆ ಎಂದು ವಿಷಾದಿಸಿದರು.

ಈಗಲಾದರೂ ಎಚ್ಚೆತ್ತುಕೊಂಡ ವಿಶ್ವಕರ್ಮರು ಸಮಾಜವನ್ನು ಸುಂದರ, ಬಲಿಷ್ಠವಾಗಿ ಕಟ್ಟಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಶ್ವಕರ್ಮರು ಹಿಂದುಳಿದ ಸಮಾಜದವರಾಗಿದ್ದರೂ ಸಂಘಟನೆಯಲ್ಲಿ ಒಗ್ಗಟ್ಟಾಗಿದ್ದೇವೆ. ರಾಜಕೀಯ ಲಾಭಕ್ಕಾಗಿ ನಮ್ಮ ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ತಿಳಿಸಿದರು.

ಮಲೇಬೆನ್ನೂರಿನಲ್ಲಿ ಯುವಕರ ನೇತೃತ್ವದಲ್ಲಿ ಐತಿಹಾಸಿಕ ಲಕ್ಷ ದೀಪೋತ್ಸವ, ಲೋಕಕಲ್ಯಾಣಾರ್ಥ ಚಂಡಿಕಾ ಹೋಮ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ದೇಶಿತ ಶ್ರೀ ಕಾಳಿಕಾದೇವಿ ಸಮುದಾಯ ಭವನದ ನೀಲಿನಕ್ಷೆ ಅನಾವರಣಗೊಳಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಬೇರೆ ಹೋಲಿಕೆಯೇ ಇಲ್ಲ. ವಿಶ್ವಕರ್ಮರು ಹಿಂದುಳಿದ ಸಮಾಜವಾಗಿದ್ದರೂ ನಿಮ್ಮಲ್ಲಿ ವಿಶೇಷವಾದ ಪ್ರತಿಭೆ ಇದೆ. ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಸರ್ಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಇಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ, ನಾನು ಕೂಡ ವೈಯಕ್ತಿಕವಾಗಿ ₹1 ಲಕ್ಷ ನೆರವು ನೀಡುತ್ತೇನೆ ಮತ್ತು ಅನುದಾನ ಕೊಡಿಸಲು ಸಹಕರಿಸುತ್ತೇನೆ ಎಂದರು.

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಸುಜ್ಞಾನಮೂರ್ತಿ ಮಾತನಾಡಿ, ಸಮಾಜದವರು ಒಂದೆರೆಡು ಹಾಸ್ಟೆಲ್‌ ಕಟ್ಟಿದ್ದು ಬಿಟ್ಟರೆ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ, ಶಿಕ್ಷಣ ಸಂಸ್ಥೆಗಳ ಕಟ್ಟಿ, ಸಮಾಜದವರನ್ನು ಕೆಎಎಸ್‌, ಐಎಎಸ್‌ ಅಧಿಕಾರಿಗಳನ್ನಾಗಿ ಮಾಡಬೇಕು. ರಾಜಕೀಯ ರಂಗದಲ್ಲೂ ಛಾಪು ಮೂಡಿಸಬೇಕೆಂದರು.

ನಿಗಮದಿಂದ ನಿರುದ್ಯೋಗಿ ಯುವಕ- ಯುವತಿಯರಿಗೆ ದೊರಕುವ ಸೌಲಭ್ಯ, ಶಿಷ್ಯವೇತನದ ಮಾಹಿತಿ ನೀಡಿದರು. ಮಹಿಳೆಯರಿಗೆ ಅತ್ಯಾಧುನಿಕ ಹೊಲಿಗೆ ಯಂತ್ರ ನೀಡಲಾಗುತ್ತಿದ್ದು ಅರ್ಹರು ತಮ್ಮ ಹೆಸರುಗಳನ್ನು ನೋಂದಾಯಿಸಿ ಪಡೆಯಲು ತಿಳಿಸಿದರು.

ವಡ್ಡನಾಳ್‌ ಕಾಶಿಮಠ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಂಸ್ಕಾರದ ಕೊರತೆ ಸಮಾಜದ ಅವನತಿಗೆ ಕಾರಣವಾಗುವುದು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಹೆಚ್ಚಾಗಿರುವುದು, ವಧುಗಳ ಕೊರತೆ ಸಮಾಜಕ್ಕೆ ಕಂಟಕವಾಗಿದೆ. ವಿದ್ಯೆಗೆ ಹೆಚ್ಚು ಒತ್ತು ನೀಡಿ, ಯುವಕ, ಯುವತಿಯರು ಉನ್ನತ ಶಿಕ್ಷ ಣ ಪಡೆದು ಸಮಾಜದಲ್ಲಿ ಮುಂದೆ ಬನ್ನಿರಿ ಎಂದು ಸಲಹೆ ನೀಡಿದರು.

ಬಸವ ತಪೋವನದ ಶಿವಾನಂದ ಗುರೂಜಿ ಮಾತನಾಡಿ, ರಾಜಕೀದವರು ತಮ್ಮ ಲಾಭಕ್ಕಾಗಿ ಹಿಂದೂ- ಅಹಿಂದ ಎಂದು ಮಾಡಿದ್ದಾರೆ. ಎಲ್ಲ ಸಮಾಜ, ಧರ್ಮಗಳ ಯುವಕರು ಹಿಂದೂ- ಅಹಿಂದ ಬಿಟ್ಟು ಪ್ರತಿಯೊಬ್ಬರೂ ಮೊದಲು ಭಾರತೀಯರಾಗಿ ಎಂದು ಸಲಹೆ ನೀಡಿದರು.

ಜ್ಞಾನಘನ ವಿದ್ಯಾತೀರ್ಥ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ, ಶಿವಮೊಗ್ಗದ ರಾಜೇಶ್ವರಿ, ಬೇಲೂರು ರವಿಚಂದ್ರನ್, ಎಂಜಿನಿಯರ್‌ ಎ.ಬಿ.ರವಿ, ಬೆಂಗಳೂರಿನ ರಂಜಿತ್ ಮಾತನಾಡಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪ್ರಕಾಶ್‌ ಸಭೆ ಅಧ್ಯಕ್ಷತೆ ವಹಿಸಿ, ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಗುಣಗಾನ ಮಾಡಿದರು. ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಉಪ ತಹಸೀಲ್ದಾರ್‌ ಜಗನ್ನಾಥಾಚಾರ್‌, ಶಿಕ್ಷಕ ಸುರೇಶ್‌, ಮಹೇಶ್‌, ‌ಬಸಾಪುರ ನಾಗೇಂದ್ರಾಚಾರ್‌, ಹಿರಿಯರಾದ ಎ.ಎಸ್. ಮೌನೇಶ್ವರಾಚಾರ್ಯ, ಮಲ್ಲಿಕಾರ್ಜುನ ಆಚಾರ್, ಜಿಗಳಿಯ ಸೋಮಶೇಖರ ಆಚಾರ್, ಸಮಾಜದ ಉಪಾಧ್ಯಕ್ಷ ಕೆ. ಕೇಶವಾಚಾರ್, ಸಹ ಕಾರ್ಯದರ್ಶಿ ಡಿ.ಕುಮಾರ್, ಸಂಘಟನಾ ಕಾರ್ಯದರ್ಶಿ ಜಿಗಳಿಯ ಕೆ.ಶಂಕರಾಚಾರ್, ಸದಸ್ಯರಾದ ಎಂ. ಆಚಾರಪ್ಪಚಾರ್, ಮಾಸೂರು ನಾಗರಾಜ ಆಚಾರ್, ಬಿ.ಆರ್. ಮೇಘಾಚಾರ್, ಎಸ್.ರಾಮಚಂದ್ರ ಆಚಾರ್, ಕೆ. ಲೋಕೇಶ ಆಚಾರ್, ಬಿ.ಎ. ದಿನೇಶ ಆಚಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಮಾಜದ ಕಾರ್ಯದರ್ಶಿ ವಿ. ಆನಂದಾಚಾರ್‌ ಸ್ವಾಗತಿಸಿ, ವಂದಿಸಿದರು.

- - -

(-ಫೋಟೋ:)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾಮಸ್ತಕಾಭಿಷೇಕಕ್ಕೆ ಸಂಘಟಿತ ಸಿದ್ಧತೆ ಅಗತ್ಯ: ಡಾ. ಹೆಗ್ಗಡೆ
ಸಿ ಆ್ಯಂಡ್ ಡಿ , ಸೆಕ್ಷನ್-೪ ಸಮಸ್ಯೆ ಪರಿಹಾರ ಅಗತ್ಯ: ಮಂತರ್‌