ಕನ್ನಡಪ್ರಭ ವಾರ್ತೆ ಹಾನಗಲ್ಲ
ಉರುಳುವ ಕಾಲ ಚಕ್ರದಲ್ಲಿ ಹೂವುಗಳು ಅರಳಬೇಕಲ್ಲದೆ ಮುಳ್ಳುಗಳನ್ನು ಬೆಳೆಸುವುದು ಬೇಡ, ಹೊಸತನವ ಬಿತ್ತಿ ಬೆಳೆಯುವ ಇಚ್ಛಾಶಕ್ತಿ ನಮ್ಮದಾಗಬೇಕು ಎಂದು ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ನುಡಿದರು.ಇಲ್ಲಿನ ಅ.ನ.ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್, ಮಂಥನ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ, ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪ್ರೀತಿಯೇ ನಿಜವಾದ ಗೆಲುವು. ನಮ್ಮ ಬರಹ-ಬದುಕು ಒಂದೇ ಆಗಿರಬೇಕಾಗಿದೆ. ಯಾವುದೇ ಪ್ರಶಸ್ತಿ, ಪುರಸ್ಕಾರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ರಾಜ್ಯೋತ್ಸವ ಪ್ರಶಸ್ತಿಯ ಕನಸು ಕಾಣದ ನನಗೆ ಬಂದಿದೆ. ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಎಂಬುದು ಪ್ರಶಸ್ತಿಗಲ್ಲ. ಬಂದಾಗ ಸ್ವೀಕರಿಸಬೇಕಷ್ಟೆ ಎಂದರು.
ಹಿರಿಯ ಪತ್ರಕರ್ತ ಋಷಿಕೇಶ ಬಹಾದ್ದೂರದೇಸಾಯಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಶಸ್ತಿಗಳು ಅರ್ಹರ ಮುಡಿಗೇರಬೇಕು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಜಗವೇ ಮೆಚ್ಚುವ ಸಾಧಕರಿದ್ದಾರೆ ಎಂಬ ಅರಿವು ಬಹುಪಾಲು ಜನರಿಗೆ ಇಲ್ಲ. ಸರ್ಕಾರ, ಸಮಾಜ ರೋಗಗ್ರಸ್ಥವಾಗುತ್ತಿವೆ. ದೂರದೃಷ್ಟಿ ಇಲ್ಲದ ಸಾಮಾಜಿಕ ವ್ಯವಸ್ಥೆಯ ನಡುವೆ ನಾವಿದ್ದೇವೆ ಎನಿಸುತ್ತಿದೆ. ಕೆಲವು ವಿಐಪಿಗಳೆಂದುಕೊಂಡವರಿಗೆ ಬೆಂಗಳೂರು ಬಿಟ್ಟು ಬೇರೆ ಗೊತ್ತೇ ಇಲ್ಲ. ಹಾಗೆ ನೋಡಿದರೆ ಬೆಂಗಳೂರಿನ ಬಹುತೇಕರಿಗೆ ನಿಜವಾದ ಕರ್ನಾಟಕವೇ ಗೊತ್ತಿಲ್ಲ. ರಾಜಧಾನಿ ಕೇಂದ್ರಿತ ಮನೋಭಾವ ಬದಲಾಗಬೇಕು. ಊರು ಸಣ್ಣದ ದೊಡ್ಡದು ಎನ್ನುವುದಕ್ಕಿಂತ ಸಾಧನೆ ಎಂತಹದ್ದು ಎಂಬ ಅರಿವು ಮುಖ್ಯ. ಕಲೆ ಶ್ರೀಮಂತರ ವ್ಯಾಪಾರೀಕರಣದ ಸ್ವತ್ತು ಅಗಬಾರದು. ನಾವು ಸತ್ಯದ ಪರವಾಗಿದ್ದು ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು."ಕನ್ನಡಪ್ರಭ ಅಸಾಮಾನ್ಯ ಕನ್ನಡಿಗ " ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಗೊಂದಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಕ್ತ ದಾನವಾಗಬೇಕೆ ಹೊರತು ದಾರಿಯಲ್ಲಿ ಪೋಲಾಗುವುದು ಬೇಡ. ರಕ್ತ ದಾನದ ನೈಜ ಹಿತ ಅವಶ್ಯಕತೆಯ ಅರಿವು ಮೂಡಿಸಬೇಕಾಗಿದೆ. ಇಂಥ ವಿಷಯಗಳಲ್ಲಿ ಸಮರ್ಪಣಾ ಭಾವ ಬೇಕು. ಮಾನವೀಯ ಕೆಲಸಗಳನ್ನು ಗೌರವಿಸೋಣ. ಅದಕ್ಕಾಗಿ ಸಿಗುವ ಸಮ್ಮಾನಗಳನ್ನೂ ಗೌರವಿಸೋಣ ಎಂದರು.
ಶಿರಸಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗವತ ಸನ್ಮಾನ ಸ್ವೀಕರಸಿ ಮಾತನಾಡಿ, ಮಕ್ಕಳನ್ನು ವರ್ಗ ಕೋಣೆಯ ಒಳಗೆ ಹೊರಗೆ ಪ್ರೀತಿಸಿ ಪಾಠ ಮಾಡಿದ್ದಕ್ಕೆ, ಪ್ರತಿಭೆಯ ಗುರುತಿಸಿ ಬೆಳಸಿದ್ದಕ್ಕೆ, ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಾಠದಾಚೆಗಿನ ಸಾಂಸ್ಕೃತಿಕ ಪರಿಸರವನ್ನು ಮಕ್ಕಳಿಗೆ ಪರಿಚಯಿಸಿದ್ದಕ್ಕೆ ನನಗೆ ಪ್ರಶಸ್ತಿ ಬಂದಿದೆ. ಜಗತ್ತು ವಿಶಾಲವಾಗಿದೆ. ಈ ಜಗತ್ತಿನಲ್ಲಿ ಒಳ್ಳೆಯದನ್ನು ನೋಡಿ ಕಲಿಯುವುದು ಕೂಡ ಬಹಳ ಇದೆ ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಹಿರಿಯ ಶಿಕ್ಷಕ ಕೆ.ಎಚ್. ಆರಾಧ್ಯಮಠ ಅವರಿಗೆ ಬಿ.ಬಿ. ಪದಕಿ ಆದರ್ಶ ಶಿಕ್ಷಕ ಪುರಸ್ಕಾರ, ವೀರನಗೌಡ ಪಾಟೀಲ ಹಾಗೂ ಸೌಜನ್ಯ ಕುಲಕರ್ಣಿ ಅವರಿಗೆ ಅ.ನ. ಕುಂದಾಪುರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟಿನ ಗೌರವಾಧ್ಯಕ್ಷ ಕೆ.ಎಲ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಉದಯ ನಾಸಿಕ, ಕಾರ್ಯದರ್ಶಿ ಗಿರೀಶ ದೇಶಪಾಂಡೆ, ಶರಶ್ಚಂದ್ರ ದೇಸಾಯಿ, ಪ್ರಕಾಶ ಪದಕಿ ವೇದಿಕೆಯಲ್ಲಿದ್ದರು. ಗಣ್ಯರಾದ ವಿ.ಬಿ. ದೀಕ್ಷಿತ್, ಆರ್.ಸಿ. ದೇಸಾಯಿ, ಆನಂದ ಗಾಜಿಪುರ, ಶರಶ್ಚಂದ್ರ ದೇಸಾಯಿ, ಸರಸ್ವತಿ ಸಂಗೀತ ಶಾಲೆಯ ಕಲಾವಿದ ನರಸಿಂಹ ಕೋಮಾರ ಹಾಗೂ ಕಲಾವಿದರು ಪ್ರಾರ್ಥನೆ ಹಾಗೂ ಗುರು ಸ್ಮರಣೆಯ ಗೀತೆಗಳನ್ನು ಹಾಡಿದರು. ಕಾರ್ಯದರ್ಶಿ ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಅಧ್ಯಕ್ಷ ಉದಯ ನಾಸಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಮುನಾ ಕೋನೇಸರ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಪದಕಿ ವಂದಿಸಿದರು.