ಮಾಯಕೊಂಡ ಜನತೆ ಈ ಬಾರಿಯೂ ಬಿಜೆಪಿ ಬೆಂಬಲಿಸಿ: ಸಂಸದ ಜಿ.ಎಂ.ಸಿದ್ದೇಶ್ವರ

KannadaprabhaNewsNetwork | Published : Mar 20, 2024 1:15 AM

ಸಾರಾಂಶ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನಾವೆಲ್ಲರೂ ಶ್ರಮಿಸಬೇಕಿದೆ. ಈ ದೇಶದ ಭವಿಷ್ಯವು ನಮ್ಮೆಲ್ಲಾ ಕಾರ್ಯಕರ್ತರು, ಮತದಾರರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ನಾಲ್ಕು ಸಲ ಜಿ.ಎಂ.ಸಿದ್ದೇಶ್ವರರನ್ನು ಗೆಲ್ಲಿಸಿದ್ದೀರಿ. ಈ ಬಾರಿ ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ಕೇಂದ್ರದ ಯೋಜನೆಗಳು ಜನರಿಗೆ ತಲುಪಿದ್ದು, ಅವುಗಳನ್ನು ಮುಂದಿಟ್ಟು ನಾವು ಮತಯಾಚನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜನತೆ 7ಕ್ಕೂ ಹೆಚ್ಚು ಸಲ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿ, ಆಶೀರ್ವಾದಿಸಿದಂತೆ ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಕೈಗಳ ಮತ್ತಷ್ಟು ಬಲಪಡಿಸಲು ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.

ತಾಲೂಕಿನ ಬಾಡಾ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸಮುದಾಯ ಭ‍ವನದಲ್ಲಿ ಮಂಗಳವಾರ ಬಿಜೆಪಿ ಪ್ರಮುಖ ಕಾರ್ಯಕರ್ತರರ ಸಭೆಯಲ್ಲಿ ಮಾತನಾಡಿ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆಯೇ ಲೋಕಸಭೆ ಚುನಾವಣೆ ಕಾವು ಮತ್ತಷ್ಟು ತೀವ್ರವಾಗಿ ಆರಂಭವಾಗಲಿದೆ. ನನ್ನ ಅವಧಿಯಲ್ಲಿ ದಾವಣಗೆರೆ ಅಭಿವೃದ್ಧಿ ಜೊತೆಗೆ ಬಾಡಾ ಗ್ರಾಮಕ್ಕೂ ಸಾಕಷ್ಟು ಅನುದಾನ ನೀಡಿದ್ದು, ಮೋದಿ ಪ್ರಧಾನಿಯಾದ ನಂತರ ಕಳೆದೊಂದು ದಶಕದಲ್ಲಿ ದೇಶ ಸಾಕಷ್ಟು ಮುಂದುವರಿದಿದೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನಾವೆಲ್ಲರೂ ಶ್ರಮಿಸಬೇಕಿದೆ. ಈ ದೇಶದ ಭವಿಷ್ಯವು ನಮ್ಮೆಲ್ಲಾ ಕಾರ್ಯಕರ್ತರು, ಮತದಾರರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ನಾಲ್ಕು ಸಲ ಜಿ.ಎಂ.ಸಿದ್ದೇಶ್ವರರನ್ನು ಗೆಲ್ಲಿಸಿದ್ದೀರಿ. ಈ ಬಾರಿ ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ಕೇಂದ್ರದ ಯೋಜನೆಗಳು ಜನರಿಗೆ ತಲುಪಿದ್ದು, ಅವುಗಳನ್ನು ಮುಂದಿಟ್ಟು ನಾವು ಮತಯಾಚನೆ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಮೋದಿಗೆ ಮತ್ತೆ ಪ್ರಧಾನಿ ಮಾಡಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಪಕ್ಷದ ಚುನಾವಣಾ ಸಂಚಾಲಕ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದೂ ಅಷ್ಟೇ ಸತ್ಯ. ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ, ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೊಂದಾಗಿ ಭಾರತ ಮುನ್ನಡೆದಿದೆ. ಜಾಗತಿಕ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವಾಗಿಸಲು ಪ್ರತಿಯೊಬ್ಬ ಮತದಾರರೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ನರೇಂದ್ರ ಮೋದಿ ನಾಯಕತ್ವ ದೇಶಕ್ಕೆ ಅತ್ಯಗತ್ಯವಾಗಿದೆ. ದೇಶದ ಅಭಿವೃದ್ಧಿ, ಸಂಸ್ಕೃತಿ ಉಳಿಯಬೇಕೆಂದರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಶೇ.1ರಷ್ಟು ಅಭಿವೃದ್ಧಿ ಕಾರ್ಯವಾಗಿಲ್ಲ. ಪರಿಶಿಷ್ಟರಿಗೆ ಮೀಸಲಾಗಿಟ್ಟಿದ್ದ 11 ಸಾವಿರ ಕೋಟಿಗೂ ಅಧಿಕ ಹಣವನ್ನು ನುಂಗಿ ನೀರು ಕುಡಿದಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ, ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, ಮಂಜಾನಾಯ್ಕ, ಹನುಮಂತ ನಾಯ್ಕ, ಮಾಯಕೊಂಡ ಜಿ.ಎಸ್.ಶ್ಯಾಮ್‌, ಓಂಕಾರಪ್ಪ, ಕಾರಿಗನೂರು ಗಂಗಾಧರ, ಅನಿಲಕುಮಾರ ನಾಯ್ಕ ಇತರರಿದ್ದರು.

ಕಾಂಗ್ರೆಸ್‌ನಿಂದ ದುರಾಡಳಿತ

ಕಾಂಗ್ರೆಸ್ ಕೈಗೆ ಮತ್ತೆ ಅಧಿಕಾರ ಕೊಟ್ಟರೆ ಟಿಪ್ಪು ಸುಲ್ತಾನ್‌, ಔರಂಗ ಜೇಬ್‌ ಯಾವ ರೀತಿ ದುರಾಡಳಿತ ಮಾಡಿದ್ದರೋ ಅದೇ ರೀತಿ ದುರಾಡಳಿತ ಕಾಂಗ್ರೆಸ್‌ನವರು ಮಾಡುತ್ತಾರೆ. ದೇಶಕ್ಕೆ ಪುನಾ ಅಂತಹ ದುರಾಡಳಿತ ಬರಬಾರದೆಂದರೆ ನಾವೆಲ್ಲರೂ ಗಾಯತ್ರಿ ಸಿದ್ದೇಶ್ವರರನ್ನು ದಾವಣಗೆರೆ ಕ್ಷೇತ್ರದಿಂದ ಗೆಲ್ಲಿಸಬೇಕು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಕೈ ಬಲಪಡಿಸಬೇಕು.

ಜಿ.ಎಂ.ಸಿದ್ದೇಶ್ವರ, ಸಂಸದ

Share this article