ನೆಲಮಂಗಲ: ನಗರಸಭೆ ವ್ಯಾಪ್ತಿಯ ಮಲ್ಲಾಪುರ ಗ್ರಾಮಸ್ಥರು ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾಸುಗ್ಗರಾಜು ಕೆಲ ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಮಲ್ಲಾಪುರ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ಗ್ರಾಮಕ್ಕೆ ವ್ಯವಸ್ಥಿತ ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ, ವಿದ್ಯುತ್ ದೀಪ ನಿರ್ವಹಣೆ ಸೇರಿದಂತೆ ತ್ಯಾಜ್ಯ ವಿಲೇವಾರಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮನವಿ ಮಾಡಿದರು.ಗ್ರಾಮಸ್ಥರ ಮನವಿ: ಗ್ರಾಮದಲ್ಲಿ ಚರಂಡಿ ಸೌಲಭ್ಯ ಇಲ್ಲದೇ ಕಲುಷಿತ ನೀರು ರಸ್ತೆಗಳಲ್ಲೆ ಹರಿದು ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಅರಶಿನಕುಂಟೆ ಗ್ರಾಮದಿಂದ ಮಲ್ಲಾಪುರ ಮಾರ್ಗವಾಗಿ ಕುಣಿಗಲ್ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ 80 ಅಡಿಯ ರಸ್ತೆ ಒತ್ತುವರಿಯಾಗಿ ಗಿಡಗಂಟಿಗಳು ಬೆಳೆದಿದ್ದು ಕೂಡಲೇ ಒತ್ತುವರೆ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜತೆಗೆ ಗ್ರಾಮದ ವಿವಿಧೆಡೆಯ ಕಸದರಾಶಿ, ಮಣ್ಣು, ಕಸದಿಂದ ತುಂಬಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ರೋಗಗಳಿಂದ ಕಾಪಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಶಾಲೆಗೆ ಖಾತೆ ಒದಗಿಸುವಂತೆ ಮನವಿ: ಮಲ್ಲಾಪುರ ಸರ್ಕಾರಿ ಶಾಲೆ ಕಳೆದ 1955ರಲ್ಲಿ ಆರಂಭಗೊಂಡಿದ್ದು ವಾಜರಹಳ್ಳಿ ಪಂಚಾಯಿತಿಯಲ್ಲಿ ಖಾತೆ ಮಾಡಲಾಗಿದೆ. ನಗರಸಭೆಯಿಂದ ಶಾಲೆಗೆ ಇ-ಖಾತೆ ಮಾಡಿಸಿಕೊಡುವಂತೆ ಶಾಲಾ ಮುಖ್ಯಶಿಕ್ಷಕ ಸೋಮಶೇಖರ್ ಮನವಿ ಮಾಡಿದರು.ಗ್ರಾಮ ಮುಖಂಡ ಜಿ.ಮಾರಯ್ಯ ಮಾತನಾಡಿ, ಮಲ್ಲಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಅನೇಕ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲ. ಕೆಟ್ಟಿರುವ ದೀಪಗಳನ್ನು ರಿಪೇರಿ ಮಾಡದೆ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ಸಂಜೆ ವೇಳೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಕೂಡಲೇ ವಿದ್ಯುತ್ ದೀಪ ಸರಿಪಡಿಸುವಂತೆ ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ನಗರಸಭಾಧ್ಯಕ್ಷೆ ಪೂರ್ಣಿಮಾ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್‌ಮೂಡ್, ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ಗ್ರಾಮಸ್ಥರಾದ ಸಂಜೀವಯ್ಯ, ರುದ್ರಹನುಮಯ್ಯ, ನರಸಿಂಹಯ್ಯ, ಕೃಷ್ಣಪ್ಪ, ಪುಟ್ಟಣ್ಣ ಉಪಸ್ಥಿತರಿದರು.
ಪೊಟೊ10ಕೆಎನ್‌ಎಲ್‌ಎಮ್2:ನೆಲಮಂಗಲದ ಮಲ್ಲಾಪುರ ಗ್ರಾಮದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷೆ ಪೂರ್ಣಿಮಾ ಬೇಟಿ ನೀಡಿ ಪರಿಶೀಲಿಸಿದರು.