ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡರ 75ನೇ ವರ್ಷದ ಜನ್ಮ ದಿನೋತ್ಸವವನ್ನು ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ರಾಜಕೀಯ ನಾಯಕರು ಮತ್ತು ಹಣ ಉಳ್ಳವರು ತಮ್ಮ ಜನ್ಮ ದಿನ ಮತ್ತು ಹುಟ್ಟು ಹಬ್ಬವನ್ನು ದುಂದು ವೆಚ್ಚ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪದ್ದ ಎನ್ನುವಂತೆ ಕಳೆದ ಎರಡು ತಿಂಗಳಿನಿಂದ ಕೆ.ಆರ್. ನಗರ ವಿಧಾನ ಸಭಾ ಕ್ಷೇತ್ರದ ದೊಡ್ಡಸ್ವಾಮೇಗೌಡರ ಅಭಿಮಾನಿಗಳು ಮತ್ತು ಹಿತೈಷಿಗಳು ಅವರ ಜನ್ಮ ದಿನವನ್ನು ಜನ ಮುಖಿಯಾಗಿ ಆಚರಿಸಲು ನಿರ್ಧರಿಸಿ ಅದರಲ್ಲಿ ಯಶಸ್ವಿಯಾದರು.
ದೊಡ್ಡಸ್ವಾಮೇಗೌಡರ ಜನ್ಮ ದಿನದ ಅಂಗವಾಗಿ ಭಾನುವಾರ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ, ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ 100ಕ್ಕು ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ಸಾವಿರಾರು ಮಂದಿ ನಿರುದ್ಯೋಗಿಗಳ ಸಂದರ್ಶನ ನಡೆಸಿ ಕೆಲವರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಿ ಇತರ ಅರ್ಹರಿಗೆ ಕಚೇರಿಗೆ ಬಂದು ಭೇಟಿ ಮಾಡಿ ಉದ್ಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಇದರ ಜತೆಗೆ ಆರೋಗ್ಯ ಶಿಬಿರದಲ್ಲಿ ಹೃದಯ, ಶ್ವಾಸಕೋಶ, ರಕ್ತ, ದಂತ, ಮೂಳೆ, ಇ.ಎನ್.ಟಿ, ಕಣ್ಣು, ಲಿವರ್, ಕರುಳು ಸೇರಿದಂತೆ ಇತರ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಔಷಧಿ ವಿತರಿಸಿದರಲ್ಲದೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರಿಗೆ ಸಂಬಂಧಿತ ಆಸ್ಪತ್ರೆಗಳಿಗೆ ತೆರಳುವಂತೆ ಶಿಫಾರಸ್ಸು ಮಾಡಿದರು.ರಕ್ತದಾನ ಶಿಬಿರದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದ ನೂರಾರು ಮಂದಿ ಯುವಕ ಮತ್ತು ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗುವ ಕೆಲಸ ಮಾಡುವ ಮೂಲಕ ಜೀವಧಾನದ ಸಂಕಲ್ಪಕ್ಕೆ ಮುನ್ನುಡಿ ಬರೆದರು.
ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ವ್ಯವಸ್ಥಿತವಾದ ಭೋಜನ ಕಲ್ಪಿಸುವುದರೊಂದಿಗೆ ದೊಡ್ಡಸ್ವಾಮೇಗೌಡರ ಜನ್ಮ ದಿನ ಜನರ ನೆನಪಿನಲ್ಲಿರುವಂತೆ ಉತ್ತಮ ಕಾರ್ಯ ಮಾಡಿ ಕೆ.ಆರ್. ನಗರ ತಾಲೂಕಿನ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವನ್ನಾಗಿಸಲು ಬೆಂಬಲಿಗರು ಮತ್ತು ಅಭಿಮಾನಿಗಳು ಕೆಲಸ ಮಾಡಿದರು.