ಮೂಡುಬಿದಿರೆ : ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ, ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ವಲಯ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಎಂಸಿಎಸ್ ಸೊಸೈಟಿ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ ಖುಷಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, ಕೃಷಿಯೇ ನಮ್ಮ ಬದುಕು, ದೇಶದ ಜೀವಾಳ. ಕೃಷಿಯಲ್ಲಿರುವ ಅಪಾರ ಅವಕಾಶಗಳನ್ನು ಯುವಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿ ನಿರ್ದೇಶಕರಾದ ಮಾಜಿ ಸಚಿವ ಕೆ. ಅಭಯಚಂದ್ರ ಹಾಗೂ ಅನಿತಾ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಆಳ್ವಾಸ್ ಕೃಷಿ ವಿಜ್ಞಾನ ಕಾಲೇಜಿನ ಡೀನ್ ವಾಸುದೇವ ಎನ್.ಎಸ್. ಅವರು ಕೃಷಿ-ಖುಷಿ: ಪ್ರಕೃತಿ ಕೃಷಿ ವಿಸ್ಮಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಸುರತ್ಕಲ್ ಅವರು ‘ಕೃಷಿ-ಯುವ ಜನತೆ-ಆಧುನಿಕತೆ’ ಕುರಿತು ಉಪನ್ಯಾಸ ನೀಡಿದರು.ಪಾಸ್ಕಲ್ ಪಿಂಟೋ ತಾಕೊಡೆ, ನವೀನ್ ಚಂದ್ರ ಅಂಬೂರಿ, ಮುಳಿಬೆಟ್ಟು ತೇಜಸ್ ಶೆಟ್ಟಿ ಹಾಗೂ 32 ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಮಾಲಿಯಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ ಅವರನ್ನು ವಿವಿಧ ಕ್ಷೇತ್ರಗಳ ಸಾಧನೆಗಾಗಿ ಸನ್ಮಾನಿಸಲಾಯಿತು. ಮಾರ್ಪಾಡಿ ರೈತ ಸಂಘ ಹಾಗೂ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆಯನ್ನೂ ಸನ್ಮಾನಿಸಲಾಯಿತು.ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನವೀನ್ ಚಂದ್ರ ಅಂಬೂರಿ ಹಾಗೂ ಚೇತನಾ ಆರ್. ಹೆಗ್ಡೆ ಕೃಷಿ ವಿಚಾರ ಕುರಿತು ರಸಪ್ರಶ್ನೆ ನಡೆಸಿಕೊಟ್ಟರು. ಧನಂಜಯ ಮೂಡುಬಿದಿರೆ ಅವರು ಡಾ. ಅರವಿಂದ ಮಾಲಗತ್ತಿ ಅವರ ಮಳೆ ಬಂದಿತಣ್ಣಾ ಕವನ ಹಾಡಿದರು.ಕೃ.ವಿ. ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿ, ಗುಣಪಾಲ ಮುದ್ಯ ವಂದಿಸಿದರು. ಚೇತನಾ ಆರ್. ಹೆಗ್ಡೆ ಹಾಗೂ ನವೀನ್ ಅಂಬೂರಿ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.