ಕನ್ನಡಪ್ರಭ ವಾರ್ತೆ ರಾಯಚೂರು
ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಹಾಗೂ ನಾನು ಸ್ನೇಹಿತರಾಗಿದ್ದು, ಇದರಲ್ಲಿ ಪಕ್ಷ ಮತ್ತು ರಾಜಕೀಯವನ್ನು ಲೇಪಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಜನಾರ್ಧನರೆಡ್ಡಿ ಅವರು ಹಿಂದೆ, ಇಂದು ಹಾಗೂ ಮುಂದೆಯೂ ಸ್ನೇಹಿತರಾಗಿಯೇ ಇರುತ್ತೇವೆ. ಇದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಲೋಕಸಭೆ ಟಿಕೆಟ್ ನೀಡಿದರೆ ರಾಮುಲು ಸೋಲುತ್ತಾರೆ ಎಂದು ಜನಾರ್ಧನರೆಡ್ಡಿ ಹೇಳಿದ್ದಾರೆಯೋ ಇಲ್ಲವೋ ಗೊತ್ತಿಲ್ಲ ಅದು ಅವರ ದೃಷ್ಠಿಕೋನವಾಗಿದೆ ಎಂದರು.
ಎರಡೇ ದಿನದಲ್ಲಿ ರಾಜ್ಯದ 20 ಎಂಪಿ ಕ್ಷೇತ್ರಗಳಿಗೆ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸಲಿದ್ದಾರೆ. ರಾಯಚೂರು, ಬಳ್ಳಾರಿ ಮತ್ತು ಶಿವಮೊಗ್ಗದಿಂದ ತಲಾ ಮೂರು ಹೆಸರುಗಳನ್ನು ಕಳುಹಿಸಿ ಕೊಡಲಾಗಿದೆ. ಅದರಲ್ಲಿ ನನ್ನ ಹೆಸರಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಹೇಳಿದರು.ದಾವಣಗೆರೆ ಕ್ಷೇತ್ರಕ್ಕೆ ಜೆ.ಎಂ.ಸಿದ್ದೇಶ ಅವರಿಗೆ ಟಿಕೆಟ್ ನೀಡಿದರೆ ನಾವೇ ಸೋಲಿಸುತ್ತೇವೆ ಎಂದು ಅಲ್ಲಿನ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರೆ ಅದು ತಪ್ಪಾಗಿದ್ದು, ಈ ಕುರಿತು ಪಕ್ಷದ ಹೈಕಮಾಂಡ್ ವಿಚಾರಿಸುತ್ತದೆ. ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆಯು ಅನಂತಕುಮಾರ ಹೆಗಡೆಯವರ ವೈಯಕ್ತಿಕ ವಿಚಾರವಾಗಿದೆ. ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುವುದಿಲ್ಲ ಎಂದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷದಿಂದ ಸಮೀಕ್ಷೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆಗೆ ವಿಶೇಷ ಮಾನದಂಡಗಳನ್ನು ರೂಪಿಸಲಾಗಿದೆ ಅದರೆಂತೆ ಟಿಕೆಟ್ ಹಂಚಿಕೆಯಾಗಲಿದೆ ಎಂದು ಬಿ.ಶ್ರೀರಾಮುಲು ತಿಳಿಸಿದರುಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ: ರಾಯಚೂರಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ನಗರ ಮೋರ್ಚಾದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಬಿಜೆಪಿಗೆ ಕಾರ್ಯಕರ್ತರೇ ಜೀವಾಳವಾಗಿದ್ದು, ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಇನ್ನಷ್ಟು ಬಲಗೊಳಿಸಬೇಕು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 400 ಹಾಗೂ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಮುಖಂಡರು, ಕಾರ್ಯಕರ್ತರು ಇದ್ದರು.
ಧರಣಿ ಸ್ಥಳಕ್ಕೆ ಭೇಟಿ, 37 ದಿನದ ಹೋರಾಟ ಅಂತ್ಯರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ವೆಂಕಟೇಶ ನಾಯಕ ಅಸ್ಕಿಹಾಳ ಅವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬಿ.ಶ್ರೀರಾಮುಲು ಅವರು ಭೇಟಿ ನೀಡಿ, ಅವರಿಗೆ ಎಳನೀರನ್ನು ಕುಡಿಸಿ ಹೋರಾಟವನ್ನು ವಿರಮಿಸುವಂತೆ ಕೋರಿದರು. ಇದೇ ವೇಳೆ ಮಾತನಾಡಿದ ಅವರು, ಎಸ್ಟಿಗೆ ಘೋಷಣೆಯಾಗಿರುವ ಶೇ.7ರಷ್ಟು ಮೀಸಲಾತಿಯ ಅನುಷ್ಠಾನ ಹಾಗೂ ಸಮಾಜವನ್ನು ಶೆಡ್ಯೂಲ್ 9ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಕೊಳುಹಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ವೇಳೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಎಸ್ಟಿ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಇದ್ದರು.