ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ನಡೆಸಿದರೆ ಸಾಲದು, ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾ ಸೌಧದ ಸಭಾ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ ೧೫೫ನೇ ಜನ್ಮ ದಿನ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ ೧೨೦ ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಮಹಾತ್ಮ ಗಾಂಧೀಜಿ ದೇಶಕ್ಕೆ ಹೋರಾಟದ ಮೂಲಕವೇ ಸ್ವಾತಂತ್ರ್ಯ ತರಲು ಶ್ರಮಿಸಿದರು. ಅಲ್ಲದೆ ಸ್ವಾತಂತ್ರ್ಯ ಹೋರಾಟವನ್ನು ಪ್ರಾಮಾಣಿಕವಾಗಿ ನಡೆಸಿದ್ದರು. ಅವರ ಹೋರಾಟವೇ ಸ್ಫೂರ್ತಿಯಾಗಬೇಕಿದೆ ಎಂದರು.
ಲಾಲ್ ಬಹದ್ದೂರು ಶಾಸ್ತ್ರಿ ಕೂಡ ಅವರು ಕೂಡ ದೇಶದ ಪ್ರಧಾನಿಯಾಗಿದ್ದಾಗ ಜೈ ಜವಾನ್, ಜೈ ಕಿಸಾನ್ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ್ದರು ಎಂದರು.ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಾನವೀಯ ಮೌಲ್ಯ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಮುನ್ನಡೆದರೆ ಜಯಂತಿಗಳಿಗೊಂದು ಅರ್ಥ ಸಿಗಲಿದೆ ಎಂದು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಕಾರ್ಮಿಕ ನಿರೀಕ್ಷಕ ನಾರಾಯಣಸ್ವಾಮಿ, ಪುರಸಭೆ ಸದಸ್ಯರು ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.ತಾಪಂ ಇಒ ಗೈರು!
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸೇರಿದಂತೆ ಹಲವು ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾತಿ ಎದ್ದು ಕಾಣುತ್ತಿತ್ತು.ಗಾಂಧಿ ಜಯಂತಿಯಲ್ಲಿ ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಡಿಪಿಒ, ಸೆಸ್ಕಾಂ ಎಇಇ, ಟಿಎಸ್‌ಡಬ್ಲ್ಯುಡಿ ಹೊರತುಪಡಿಸಿ ಉಳಿದ ತಾಲೂಕು ಮಟ್ಟದ ಅಧಿಕಾರಿಗಳು ಜಯಂತಿಗೆ ಬಂದಿರಲಿಲ್ಲ.
ತಹಸೀಲ್ದಾರ್ ಟಿ.ರಮೇಶ್ ಬಾಬು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ, ತಾಲೂಕು ಮಟ್ಟದ ಅಧಿಕಾರಿಗಳು ಗಾಂಧಿ ಜಯಂತಿಗೆ ಹಾಜರಿರಬೇಕು ಎಂದು ಮೆಸೇಜ್ ಕೂಡ ಹಾಕಿದ್ದೇನೆ ಎಂದರು.