ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಪೊಲೀಸರಿಗೆ 501 ಹೆಲ್ಮೆಟ್ ಕೊಡುಗೆಯಾಗಿ ನೀಡುವ ಮೂಲಕ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನವನ್ನು ನಗರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಿತು.
ಕನ್ನಡಪ್ರಭ ವಾರ್ತೆ ಬೀದರ್
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಪೊಲೀಸರಿಗೆ 501 ಹೆಲ್ಮೆಟ್ ಕೊಡುಗೆಯಾಗಿ ನೀಡುವ ಮೂಲಕ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನವನ್ನು ನಗರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಿತು.
ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಮಿತಿಯ ಭಾಲ್ಕಿ ತಾಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಹೆಲ್ಮೆಟ್ ವಿತರಿಸಿದರು. ಜನ್ಮದಿನದ ಅಂಗವಾಗಿ ಬೃಹತ್ ಗಾತ್ರದ ಕೇಕ್ ಕತ್ತರಿಸಲಾಯಿತು. ಸಭಿಕರಿಗೆ ಪ್ರಸಾದ ವಿತರಿಸಲಾಯಿತು.
ಎಸ್‌ಬಿಐ ಎಟಿಎಂ ದರೋಡೆಕೋರರ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಸಾಗರ ಖಂಡ್ರೆ ಅವರು, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯಿಂದ ಪ್ರತಿ ವರ್ಷ ಸಾಮಾಜಿಕ ಚಟುವಟಿಕೆಗಳೊಂದಿಗೆ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನ ಆಚರಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಪೊಲೀಸರು ಸಾರ್ವಜನಿಕರ ಸುರಕ್ಷತೆಗೆ ಸದಾ ಸಿದ್ಧರಿರುತ್ತಾರೆ. ಹೀಗಾಗಿ ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು. ಪೊಲೀಸರಿಗೆ ಹೆಲ್ಮೆಟ್ ಕೊಡುಗೆಯಾಗಿ ನೀಡಿರುವ ಸಮಿತಿಯ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಮಿತಿಯಿಂದ ಅವರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಹವಾ ಮಲ್ಲಿನಾಥ ಮಹಾರಾಜರು ಅಪರೂಪದ ಸಂತರಾಗಿದ್ದಾರೆ. ಧರ್ಮ ಹಾಗೂ ರಾಷ್ಟ್ರಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯ ಗಳೊಂದಿಗೆ ಜನ್ಮದಿನ ಆಚರಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದು ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.