ಶ್ರಮದಾನದ ಮೂಲಕ ಅರ್ಥಪೂರ್ಣ ಜಯಂತಿ ಆಚರಣೆ

KannadaprabhaNewsNetwork | Published : Oct 5, 2024 1:34 AM

ಸಾರಾಂಶ

ಹಾನಗಲ್ಲ ತಾಲೂಕಿನ ಎಲ್ಲ ೪೨ ಗ್ರಾಪಂ ಹಾಗೂ ಸ್ಥಳೀಯ ಪುರಸಭೆ ವ್ಯಾಪ್ತಿಯ ೫ ಸ್ಥಳಗಳು ಸೇರಿದಂತೆ ಒಟ್ಟು ೪೭ ಸ್ಥಳಗಳಲ್ಲಿ ಏಕಕಾಲಕ್ಕೆ ಶ್ರಮದಾನ ಕೈಗೊಳ್ಳುವ ಮೂಲಕ ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಾನಗಲ್ಲ: ತಾಲೂಕಿನ ಎಲ್ಲ ೪೨ ಗ್ರಾಪಂ ಹಾಗೂ ಸ್ಥಳೀಯ ಪುರಸಭೆ ವ್ಯಾಪ್ತಿಯ ೫ ಸ್ಥಳಗಳು ಸೇರಿದಂತೆ ಒಟ್ಟು ೪೭ ಸ್ಥಳಗಳಲ್ಲಿ ಏಕಕಾಲಕ್ಕೆ ಶ್ರಮದಾನ ಕೈಗೊಳ್ಳುವ ಮೂಲಕ ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬುಧವಾರ ಇಲ್ಲಿನ ದೇವಸ್ಥಾನ, ಪ್ರಾರ್ಥನಾ ಮಂದಿರ, ಸರ್ಕಾರಿ ಆಸ್ಪತ್ರೆ, ಕೆರೆ, ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಕೈಗೊಳ್ಳುವ ಮೂಲಕ ಸ್ವಚ್ಛಗೊಳಿಸಲಾಯಿತು. ಶಾಸಕ ಶ್ರೀನಿವಾಸ ಮಾನೆ ಅವರು ಸ್ವತಃ ಹಾನಗಲ್, ಕರಗುದರಿ, ಯಳವಟ್ಟಿ, ಬಮ್ಮನಹಳ್ಳಿ, ಹುಲ್ಲತ್ತಿ, ಬೈಚವಳ್ಳಿ, ಕೊಪ್ಪರಸಿಕೊಪ್ಪ ಗ್ರಾಮಗಳಲ್ಲಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.ಬಳಿಕ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಶ್ರಮದಾನದ ಮೂಲಕ ಅರ್ಥಪೂರ್ಣ ಜಯಂತಿ ಆಚರಣೆಯೊಂದಿಗೆ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಬರುವ ಮುಂದಿನ ೪ ಬುಧವಾರಗಳಂದೂ ಸಹ ಮತ್ತೆ ತಾಲೂಕಿನ ೪೨ ಗ್ರಾಪಂ ಹಾಗೂ ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿ ಬೆಳಗ್ಗೆ ೭ ರಿಂದ ೧೦ ಗಂಟೆವರೆಗೆ ೩ ಗಂಟೆಗಳ ಕಾಲ ಶ್ರಮದಾನಕ್ಕೆ ಸಂಕಲ್ಪಿಸಲಾಗಿದೆ. ಕಾಟಾಚಾರದ ಜಯಂತಿ ಆಚರಣೆ ಬೇಡ ಎನ್ನುವ ಉದ್ದೇಶದಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಸಂಘಟಿತವಾಗಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಸಹಭಾಗಿತ್ವ ಸಹ ಪಡೆಯಲಾಗಿದೆ. ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳ ಸದಸ್ಯರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಈ ವಿಶೇಷ ಶ್ರಮದಾನ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.ತಹಸೀಲ್ದಾರ್ ಎಸ್.ರೇಣುಕಾ, ತಾಪಂ ಇಒ ಪರಶುರಾಮ ಪೂಜಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಾನಗಲ್ ತಾಲೂಕಿನಲ್ಲಿ ಏಕಕಾಲಕ್ಕೆ ೪೭ ಸ್ಥಳಗಳಲ್ಲಿ ಶ್ರಮದಾನ ಕೈಗೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಇಡೀ ಅಕ್ಟೋಬರ್ ತಿಂಗಳ ಎಲ್ಲ ಬುಧವಾರಗಳಂದು ೩ ಗಂಟೆಗಳ ಕಾಲ ಶ್ರಮದಾನಕ್ಕೆ ನಿರ್ಧರಿಸಲಾಗಿದೆ. ಅಧಿಕಾರಿಗಳು, ಸರ್ಕಾರಿ ನೌಕರರು, ಸಮುದಾಯದ ಸಹಭಾಗಿತ್ವದಿಂದ ರಾಜ್ಯ ಗುರುತಿಸುವಂಥ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

Share this article