ಮಯೂರವರ್ಮನ ಶಾಸನ ವಿಶ್ಲೇಷಣೆ । ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಅವರಿಂದ ವಿನೂತನ ಪ್ರಯೋಗಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕನ್ನಡ ರಾಜ್ಯೋತ್ಸವ ಆಚರಣೆ ಅಂದಾಕ್ಷಣ ಭುವನೇಶ್ವರಿ ಮೆರವಣಿಗೆ, ಆರ್ಕೆಸ್ಟ್ರಾ ಆಯೋಜನೆ, ಕನ್ನಡ ಭಾಷೆ ಅಳಿವು ಉಳಿವಿನ ಬಗ್ಗೆ ಭಾಷಣಗಳು ಮಾಮೂಲು. ಆದರೆ ಇದರೆಲ್ಲದರಾಚೆ ವಿನೂತನ ರಾಜ್ಯೋತ್ಸವ ಆಚರಣೆಗೆ ಭಾನುವಾರ ಚಿತ್ರದುರ್ಗ ಸಾಕ್ಷಿಯಾಯಿತು. ಚಿತ್ರದುರ್ಗ ಚಂದ್ರವಳ್ಳಿಯಲ್ಲಿರುವ ಮಯೂರವರ್ಮನ ಶಾಸನದ ಮಾಹಿತಿ ಪ್ರಚುರ ಪಡಿಸುವ ಮೂಲಕ ಕನ್ನಡದ ಮೊದಲ ಸಾಮ್ರಾಜ್ಯ ಉದಯವಾದ ಐತಿಹ್ಯ ಮನನ ಮಾಡಿಕೊಡಲಾಯಿತು.ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. ಚಂದ್ರವಳ್ಳಿಯಲ್ಲಿ ನಿತ್ಯ ನೂರಾರು ವಾಯುವಿಹಾರಿಗಳು ಜಮಾವಣೆಗೊಳ್ಳುತ್ತಿದ್ದು ಅವರೆಲ್ಲರ ಸಮ್ಮುಖದಲ್ಲಿ ಖ್ಯಾತ ಶಾಸನ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಶಾಸನದಲ್ಲಿನ ಹೂರಣವ ಬಿಚ್ಚಿಟ್ಟರು. ಮುಂಜಾನೆ ಚುಮು ಚುಮು ಚಳಿಯ ನಡುವೆ ಶಾಸನದ ಮುಂಭಾಗವೇ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿಶೇಷ.
ಚಂದ್ರವಳ್ಳಿಯಲ್ಲಿ ಸಿಕ್ಕಿರುವ ಈ ಶಾಸನ ಕದಂಬ ರಾಜರು ತಮ್ಮ ಆಳ್ವಿಕೆಯನ್ನು ಪ್ರಾರಂಭ ಮಾಡಿರುವ ಇತಿಹಾಸವಿದೆ. ಕನ್ನಡಿಗರ ಆಳ್ವಿಕೆ ಉಲ್ಲೇಖಿಸುವ ಪ್ರಥಮ ಶಾಸನ ಇದಾಗಿದೆ. ಶಾಸನ ಬರಹ ಸಂಸ್ಕೃತದಲ್ಲಿದೆ. ಮಯೂರ ಶರ್ಮ, ಮಯೂರು ವರ್ಮ ಯಾವ ರೀತಿ ಆದ ಎಂಬುದರ ಬಗ್ಗೆ ತಿಳಿಸಲಾಗಿದೆ ಎಂದು ರಾಜಶೇಖರಪ್ಪ ಹೇಳಿದರು.ಮೂಲದಲ್ಲಿ ಬ್ರಾಹ್ಮಣನಾದ ಮಯೂರ ಶರ್ಮ (ಕದಂಬರು) ತನಗೆ ಆದ ಅವಮಾನದಿಂದಾಗಿ ಸೈನ್ಯ ಕಟ್ಟುವುದರ ಮೂಲಕ ಪಲ್ಲವರ ಮೇಲೆ ದಾಳಿ ಅವರ ರಾಜ್ಯದ ಕೆಲ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾನೆ. ಗೆರಿಲ್ಲಾ ಮಾದರಿಯ ಯುದ್ದ ಮಯೂರಶರ್ಮನಿಗೆ ಗೊತ್ತಿತ್ತು. ಇದರಿಂದ ವಿಚಲಿತರಾದ ಪಲ್ಲವರು ಮಯೂರ ವರ್ಮನನ್ನು ಮಣಿಸುವ ಬಗ್ಗೆ ಆಲೋಚಿಸದೆ ಗೆಳೆಯನನ್ನಾಗಿ ಮಾಡಿಕೊಳ್ಳುತ್ತಾರೆ. ರಾಜನಾಗಿ ಪಟ್ಟಾಭಿಷೇಕ ಮಾಡುವುದರ ಮೂಲಕ ಕದಂಬ ರಾಜ ಆಡಳಿತವನ್ನು ಪ್ರಾರಂಭ ಮಾಡಿದರು.
ಮಯೂರ ವರ್ಮ ಕನ್ನಡದ ರಾಜನಾಗಿದ್ದರಿಂದ ಇಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಬೆಳೆಯಲು ಸಾಧ್ಯವಾಯಿತು. ಈ ಶಾಸನವನ್ನು ಮೊದಲ ಬಾರಿಗೆ 1929ರಲ್ಲಿ ಕೃಷ್ಣಾರವರು ಓದಿದರು. ನಂತರ 1983ರಲ್ಲಿ ತಾವು ಶಾಸನವ ಅಧ್ಯಯನ ಮಾಡಿದೆ. ಸಂಸ್ಕೃತ ಭಾಷೆಯಲ್ಲಿನ ಶಾಸನವ ಅರ್ಥವನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಸಿದುದಾಗಿ ಡಾ.ಬಿ.ರಾಜಶೇಖರಪ್ಪ ಹೇಳಿದರು.ಅಪರ ಜಿಲ್ಲಾಧಿಕಾರಿ ಬಿ.ಕುಮಾರಸ್ವಾಮಿ ಮಾತನಾಡಿ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತಿಹಾಸ ಮರೆಯಾಗುತ್ತಿದೆ. ಚಂದ್ರವಳ್ಳಿಯ ಹುಲೇಗೊಂದಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಮಯೂರ ವರ್ಮನ ಶಾಸನದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಾಡಾಗಿರುವುದು ರಾಜ್ಯೋತ್ಸವದ ಆಚರಣೆಗೆ ಪೂರಕವಾಗಿದೆ ಎಂದರು.
ಕನ್ನಡ ರಾಜ್ಯೋತ್ಸವವನ್ನು ಬರೀ ನವಂಬರ್‌ನಲ್ಲಿ ಮಾತ್ರವೇ ಮಾಡದೇ ವರ್ಷದ 365 ದಿನವೂ ಆಚರಿಸಿದ್ದಲ್ಲಿ ಮಾತ್ರ ಭಾಷೆ ಬೆಳೆಯಲು ಸಾಧ್ಯ. ಪಾಶ್ಚಿಮಾತ್ಯರ ದಾಳಿಯಿಂದಾಗಿ ನಮ್ಮಲ್ಲಿ ಆಂಗ್ಲ ಭಾಷೆ ನೆಲೆಯೂರಿದೆ. ಎಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಿ, ಮಾತನಾಡಬೇಕಿದೆ. ಆಗ ಮಾತ್ರ ನಮ್ಮ ಭಾಷೆ ಬೆಳೆಯಲು ಸಾಧ್ಯವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಈ ಕಾರ್ಯಕ್ರಮವೂ ಸಣ್ಣದಾದರೂ ಉತ್ತಮ ಪ್ರಯತ್ನವೆಂಬ ಖುಷಿ ನನ್ನದಾಗಿದೆ. ಪ್ರತಿ ವರ್ಷವೂ ಈ ರೀತಿಯ ವಿನೂತನ ಕಾರ್ಯಕ್ರಮ ಆಚರಿಸಲು ಚಿಂತಿಸಲಾಗಿದೆ. ಚಿತ್ರದುರ್ಗಕ್ಕೆ ಮಯೂರ ವರ್ಮನ ಕೂಡುಗೆ ಆಪಾರವಾಗಿದೆ. ಚಿತ್ರದುರ್ಗದ ಇತಿಹಾಸದ ಬಗ್ಗೆ ತಿಳಿಯುವುದು ಇನ್ನೂ ಬಹಳ ಇದೆ ಎಂದರು.
ಕಾರ್ಯಕ್ರಮ ಸಂಯೋಜಕ ಗೋಪಾಲಸ್ವಾಮಿ ನಾಯಕ್, ಕಿರಣ್, ನಗರಸಭಾ ಸದಸ್ಯರಾದ ಫ್ರಕೃದ್ದಿನ್ ಚಂದ್ರಶೇಖರ್, ಗುತ್ತಿಗೆದಾರ ಸುರೇಶ್ ತಕ್ಕಡಿ, ಉದ್ಯಮಿ ಟಿವಿಎಸ್ ಅರುಣ್ ಇದ್ದರು.