ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೩ರಲ್ಲೇ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅನುಮೋದನೆ ದೊರೆತಿತ್ತು. ಆದರೆ ಬಳಿಕ ಭೂಸ್ವಾಧೀನ ವೆಚ್ಚ ಹೆಚ್ಚಳ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿಂದ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗಿರಲಿಲ್ಲ. ೨೦೨೪ರಲ್ಲಿ ಸಂಸದರಾಗಿ ಆಯ್ಕೆಯಾದ ಬಳಿಕ ಈ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಎರಡು- ಮೂರು ಬಾರಿ ಭೇಟಿ ಮಾಡಿ ಯೋಜನೆಯ ಸಮಸ್ಯೆಗಳನ್ನು ವಿವರಿಸಿ ಮನವಿ ಸಲ್ಲಿಸಲಾಗಿತ್ತು. ಇದರ ಪರಿಣಾಮವಾಗಿ ಸುಮಾರು ೨೦ ದಿನಗಳ ಹಿಂದೆ ಪರಿಷ್ಕೃತ ವೆಚ್ಚದ ಅಂದಾಜಿಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು. ಯೋಜನೆ ಕಾರ್ಯಗತಗೊಳ್ಳಲು ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದ್ದು, ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಲಾಗಿತ್ತಾದರೂ, ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾಲಾವಕಾಶ ಪಡೆಯಲಾಗಿದೆ ಎಂದು ತಿಳಿಸಿದರು.
ಭೂಸ್ವಾಧೀನ ಪೂರ್ಣಗೊಂಡು ಅಗತ್ಯ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿದ ಬಳಿಕ ಕಾಮಗಾರಿ ಆರಂಭಿಸಲು ಅನುಕೂಲವಾಗಲಿದೆ. ಮೊದಲ ಹಂತದ ಪ್ಯಾಕೇಜ್ ೧ರಲ್ಲಿ ಸುಮಾರು ೨೭೧ ರೈತರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಯೋಜನೆಯ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡರೆ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅಗತ್ಯವಿರುವಷ್ಟು ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಪರಿಷ್ಕೃತ ಅಂದಾಜು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ಪರಿಹಾರದಲ್ಲಿ ರೈತರಿಗೆ ಅನ್ಯಾಯವಿಲ್ಲ
ಯಾವುದೇ ರೈತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು. ಪರಿಹಾರಕ್ಕೆ ಸಂಬಂಧಿಸಿದಂತೆ ರೈತರಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದರು. ಪರಿಹಾರ ಪಡೆಯಲು ೧೯ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಗೊಂದಲ ರೈತರಲ್ಲಿದೆ. ವಾಸ್ತವವಾಗಿ ಹಲವು ದಾಖಲೆಗಳು ಈಗಾಗಲೇ ಭೂಸ್ವಾಧೀನ ಅಧಿಕಾರಿಗಳ ಬಳಿಯೇ ಲಭ್ಯವಿವೆ. ರೈತರು ಆರ್‌ಟಿಸಿ ಮತ್ತು ಕುಟುಂಬ ವೃಕ್ಷ ನೀಡಿದರೆ ಸಾಕಾಗುತ್ತದೆ. ಉಳಿದ ದಾಖಲೆಗಳನ್ನು ತಹಸೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು. ಹಾಸನ-ಬೇಲೂರು ರಸ್ತೆ ಅಭಿವೃದ್ಧಿ ಕೇವಲ ಸಂಚಾರಕ್ಕೆ ಸೀಮಿತವಾಗಿರದೆ ಜಿಲ್ಲೆಯ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಬೇಲೂರು ಮತ್ತು ಹಳೇಬೀಡು ಪ್ರಮುಖ ಪಾರಂಪರಿಕ ಪ್ರವಾಸಿ ತಾಣಗಳಾಗಿದ್ದು, ಚೆನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯಗಳಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹಾಗೂ ಅಪಘಾತಗಳ ಸಮಸ್ಯೆಯೂ ಇರುವುದರಿಂದ ರಸ್ತೆ ಅಭಿವೃದ್ಧಿ ಅಗತ್ಯವಾಗಿದೆ. ಚತುಷ್ಪಥ ರಸ್ತೆ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ಶ್ರೇಯಸ್ ಪಟೇಲ್ ಹೇಳಿದರು.
============== ಬಾಕ್ಸ್:::; ಕ್ರೆಡಿಟ್‌ಗಿಂತ ಕಾಮಗಾರಿ ಮುಖ್ಯ