ಹಾವೇರಿ: ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಎಂದು ತಿಳಿಸಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಬ್ರಿಜ್-ಕಂ ಬ್ಯಾರೇಜ್ ದುರಸ್ತಿಗೆ ಅನುದಾನ ಮಂಜೂರು ಮಾಡಲಾಗುವುದು. ನದಿಗಳಲ್ಲಿ ನೀರು ಸಂಗ್ರಹಣೆ ಕ್ರಮವಹಿಸಲಾಗುವುದು ಎಂದರು.ವರದಾ-ಬೇಡ್ತಿ ನದಿ ಜೋಡಣೆ ಕುರಿತು ಡಿಪಿಆರ್ ಆಗುತ್ತಿದೆ. ಕೋಳೂರ-ಗಣಜೂರ ಕೈಗಾರಿಕಾ ಪ್ರದೇಶದ ಮೊದಲ ಹಂತದ ಅಭಿವೃದ್ಧಿ ಕಾರ್ಯಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು. ಹಾವೇರಿ ದೇವಗಿರಿ ರಸ್ತೆ ಕಾಮಗಾರಿಗೆ ರು.50 ಕೋಟಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲ ರಸ್ತೆಗಳ ತಗ್ಗುಗುಂಡಿ ಮುಚ್ಚುವ ಕೆಲಸಕ್ಕೆ ನವೆಂಬರ್ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗುವುದು ಹಾಗೂ ಬರುವ ಫೆಬ್ರವರಿ-ಮಾರ್ಚ್ ಅಂತ್ಯದೊಳಗೆ ಎಲ್ಲ ರಸ್ತೆ ತಗ್ಗುಗುಂಡಿಗಳನ್ನು ಮುಚ್ಚಿಸಲಾಗುವುದು ಎಂದರು. ಆರೋಗ್ಯ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆ ಆ್ಯಂಬುಲೆನ್ಸ್ ಅವ್ಯವಸ್ಥೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ಸೇವೆ ನೀಡುವುದು ಮೊದಲ ಆದ್ಯತೆಯಾಗಿದೆ. ಹಾಗಾಗಿ ಎಲ್ಲ ಆ್ಯಂಬುಲೆನ್ಸಗಳು ಸುಸ್ಥಿತಿಯಲ್ಲಿರಬೇಕು ಹಾಗೂ ರೋಗಿಗಳಿಗೆ ಸಕಾಲಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದರು. ಅಗತ್ಯ ಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ಪಶು ಇಲಾಖೆಯಲ್ಲಿ ವೈದ್ಯರ ಸಮಸ್ಯೆ ಇದ್ದು, 400 ಪಶು ವೈದ್ಯರ ನೇಮಕಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಆರೋಗ್ಯ ಇಲಾಖೆ, ಪಶು ಇಲಾಖೆ ಹಾಗೂ ಕೃಷಿ ಇಲಾಖೆ ಕೃಷಿ ಸಂಜೀವಿನಿ ವಾಹನಗಳ ಕಾರ್ಯಗಳ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಎಲ್ಲ ಲೋಪಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಉಪಸ್ಥಿತರಿದ್ದರು.