ಕನ್ನಡಪ್ರಭ ವಾರ್ತೆ ಚಾಮರಾಜನಗರನಮ್ಮ ಸರ್ಕಾರ ರೈತರ ಪರವಾಗಿದೆ, ಪದೇ ಪದೇ ಪ್ರತಿಭಟನೆ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವುದು ಬೇಡ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.
ಜಿಲ್ಲಾ ಸಾಮೂಹಿಕ ರೈತ ಸಂಘದ ನಾಯಕ ಹೊನ್ನೂರು ಪ್ರಕಾಶ್ ಸಚಿವರಿಗೆ ಮನವಿ ನೀಡಿ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಸಮಸ್ಯೆ ಬಗೆಹರಿದಿಲ್ಲ, ಮೂಲತಳಿಗಳನ್ನು ಉಳಿಸಿಕೊಂಡು ಬೆಳೆಯುತ್ತಾರೆ. ಆದರೆ, ಹೆಚ್ಚಿನ ಬೆಲೆ ನೀಡಿ ಖರೀದಿಸಲು ಮುಂದಾಗುತ್ತಿಲ್ಲ. ವನ್ಯಜೀವಿ ಸಂಘರ್ಷ ತಪ್ಪಿಲ್ಲ, ಹಂದಿ ದಾಳಿಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದಿಂದ ಬೆಳೆ ಹಾನಿಗೆ ಸರಿಯಾದ ರೀತಿ ಪರಿಹಾರ ಸಿಗುತ್ತಿಲ್ಲ. ಕಾರ್ಬನ್ ಕ್ರಿಡಿಟ್ ರೈತನಿಗೆ ಸಿಗಬೇಕು. ಎಂಎಸ್ಪಿಗಿಂತ ಸಾವಯವ ಕೃಷಿ ಉತ್ಪನ್ನ ಗಳಿಗೆ ಹೆಚ್ಚುವರಿ ಶೇ.೩೦ರಷ್ಟು ಹೆಚ್ಚಿನ ದರ ನೀಡಿ ಖರೀದಿ ಮಾಡಬೇಕು.
ಅಕ್ರಮ ದಂಧೆ ನಿಲ್ಲಬೇಕು: ಜಿಲ್ಲೆಯಲ್ಲಿ ನಡೆಯುವ ಕಪ್ಪು ಮತ್ತು ಬಿಳಿಕಲ್ಲಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು, ಕೆಲವು ಗಣಿ ಉದ್ಯಮಿಗಳ ಅನುಕೂಲಕ್ಕಾಗಿ ಗೋಮಾಳಗಳನ್ನು ಸರ್ಕಾರ ನೀಡಿದೆ. ಮಿತಿ ಮೀರಿ ಕಲ್ಲು ಸಾಗಾಣೆ ಮಾಡುತ್ತಿರುವುದರಿಂದ ರಸ್ತೆಗಳೆಲ್ಲಾ ಹಾಳಾಗುತ್ತಿವೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕು,ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ:ಎನ್‌ಆರ್‌ಇಜಿಯನ್ನು ಕೃಷಿಗೆ ಅಳವಡಿಸಬೇಕು. ಇದರಿಂದ ರೈತರಿಗೆ ಕೂಲಿ ಹಣ ಸಿಗುತ್ತದೆ. ಹನೂರು ಮತ್ತು ಗುಂಡ್ಲುಪೇಟೆ ಭಾಗದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ನಿಗಧಿತ ವೇಳೆಗೆ ಶಾಲೆಗೆ ಹೋಗಲು ಆಗುತ್ತಿಲ್ಲ ಇದರ ಬಗ್ಗೆ ಗಮನಹರಿಸಬೇಕು, ಚಂಗಡಿ ಗ್ರಾಮ ಸ್ಥಳಾಂತರ ಮಾಡಲು ಅನುದಾನ ಬಿಡುಗಡೆಯಾಗಿಲ್ಲ, ಮಳೆಯಾಶ್ರಿತ ಕೃಷಿ ಪ್ರದೇಶಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಘೋಷಿತ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕೊಟ್ಟು ಫಸಲು ಸಂಗ್ರಹಣೆ ಮಾಡುವ ಕೆಲಸದ ನಿರ್ವಹಣೆ. ಬರದಿಂದ ಬಾಧಿತರಾಗಿರುವ ರೈತರಿಗೆ ತುರ್ತಾಗಿ ಎಕರೆಗೆ ೨೫೦೦೦ ರು. ಅನುದಾನ ಬಿಡುಗಡೆ ಗೊಳಿಸಬೇಕು ಎಂದರು,
ಭರವಸೆ ನೀಡಿದ ಸಚಿವರು: ಮನವಿಯನ್ನು ಆಲಿಸಿದ ಸಚಿವ ಕೆ. ವೆಂಕಟೇಶ್ ಜಿಲ್ಲಾ ಮಟ್ಟದಲ್ಲಿ ಆಗುವ ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು, ಎಸ್ಪಿ, ಅರಣ್ಯಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ, ಅತಿ ಬೇಗ ಪರಿಹಾರ ಸಿಗಲಿದೆ, ಸರ್ಕಾರದ ಮಟ್ಟದಲ್ಲಿ ಕೆಲ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.