ಬೆಂಗಳೂರು : ಯುಗಾದಿ ಮರು ದಿನದ ಹೊಸ ತೊಡಕು ಆಚರಣೆ ಹಾಗೂ ರಂಜಾನ್ ಹಬ್ಬ ಏಕಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಬುಧವಾರ ಚಿಕನ್, ಮಟನ್‌ಗಳ ದರ ಹೆಚ್ಚಾಗಿತ್ತು. ಹೆಚ್ಚಿನ ಬೆಲೆ ಲೆಕ್ಕಿಸದೆ ಗ್ರಾಹಕರು ಮಳಿಗೆಗಳೆದುರು ಮುಗಿಬಿದ್ದು ಖರೀದಿ ಮಾಡಿದ್ದಾರೆ.
ಯುಗಾದಿ ಬಳಿಕ ಹಿಂದೂಳಿಂದ ಆಚರಿಸಲ್ಪಡುವ ಹೊಸತೊಡಕು ಹಾಗೂ ರಂಜಾನ್ ಹಬ್ಬದಲ್ಲಿ ಸಹಜವಾಗಿ ಶಾಖಾಹಾರದ ಘಮಲು ಪಸರಿಸುತ್ತದೆ. ಸಹಜವಾಗಿ ಎರಡೂ ವಿಶೇಷಗಳು ಒಟ್ಟಿಗೆ ಬಂದಿದ್ದರಿಂದ ಚಿಕನ್, ಮಟನ್‌ಗೆ ಬುಧವಾರ ಹೆಚ್ಚಿನ ಬೇಡಿಕೆಯಿತ್ತು. ಅದರಲ್ಲೂ ಪ್ರಸಿದ್ಧ ಬನ್ನೂರು ಕುರಿ, ನಾಟಿಕೋಳಿಯನ್ನು ಕೊಳ್ಳಲು ಹೆಚ್ಚಿಗೆ ಮುಂದಾಗಿದ್ದರು. ಇದರ ಪರಿಣಾಮ ಬೆಲೆಯೂ ಏರಿಕೆಯಾಗಿತ್ತು. ಅಲ್ಲದೆ, ವಿಶೇಷ ಮಾಂಸ ಖಾದ್ಯಕ್ಕಾಗಿ ಬಳಸಲ್ಪಡುವ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ತೆಂಗಿನ ಕಾಯಿ ಖರೀದಿ ಕೂಡ ಜೋರಾಗಿತ್ತು.
ಚಿಕನ್ ದರ:
ಚಿಕನ್ ಒಂದು ಕೇಜಿ ಸ್ಕೀನ್ ಔಟ್‌ಗೆ ₹300, ನಾಟಿ ಕೋಳಿ ಕೇಜಿಗೆ ₹400, ₹160 ಹಾಗೂ ಬಾಯ್ಲರ್ ಕೋಳಿಗೆ ₹200 ಮತ್ತು ಚಿಕನ್‌ಗೆ ₹280 ನಿಗದಿಯಾಗಿತ್ತು. ಇನ್ನು ಒಂದು ಕೇಜಿ ಮಟನ್‌ಗೆ ₹850 ರವರೆಗೆ ಏರಿಕೆಯಾಗಿದ್ದರೂ ಖರೀದಿ ಜೋರಾಗಿತ್ತು.
ಇಲ್ಲಿನ ಶಿವಾಜಿ ನಗರದ ಮಾರುಕಟ್ಟೆ, ಜಯನಗರ, ಮಲ್ಲೇಶ್ವರ, ಯಶವಂತಪುರ, ವೈಟ್‌ಫೀಲ್ಡ್, ಸ್ಯಾಂಕಿಟ್ಯಾಂಕ್ ರಸ್ತೆ ಸೇರಿ ಹಲವೆಡೆ ಬೆಳಗ್ಗೆಯಿಂದಲೇ ಜನತೆ ಕೋಳಿ, ಮಟನ್ ಮಾಂಸಕ್ಕಾಗಿ ಮಳಿಗೆಗಳ ಎದುರು ಸರದಿಯಲ್ಲಿ ನಿಂತಿದ್ದರು. ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಭಾರಿ ಬೇಡಿಕೆ ಬಂದಿತ್ತು. ವಿಶೇಷವಾಗಿ ಗುಡ್ಡೆ ಮಾಂಸ ತಿನ್ನುವುದು ವಾಡಿಕೆ. ಸಾಮಾನ್ಯವಾಗಿ, ಕುರಿ ಮತ್ತು ಮೇಕೆಗಳನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡಲಾಗುತ್ತದೆ. ಗುಡ್ಡೆ ಮಟನ್ ಮಾಂಸಕ್ಕೆ ಕೇಜಿಗೆ ₹800- ₹900 ಆಗಿದ್ದು, ವರ್ಷಕ್ಕೊಮ್ಮೆ ಹಬ್ಬ ಬರುವುದರಿಂದ ಬೆಲೆ ಜಾಸ್ತಿ ಆದರೂ ಹಬ್ಬ ಮಾಡಲೇಬೇಕೆಂದು ಜನರು ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ.
ಇಂದು ರಂಜಾನ್: ವಿಶೇಷ ಪ್ರಾರ್ಥನೆ
ಇಲ್ಲಿನ ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಪ್ರಮುಖ ಪ್ರಾರ್ಥನಾ ತಾಣಗಳಲ್ಲಿ ಮುಸಲ್ಮಾನರು ಇಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಒಂದು ತಿಂಗಳ ಕಾಲ ಉಪವಾಸ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ಮುಸಲ್ಮಾನರು ವೃತ ಪೂರೈಸಿ ಇಂದು ರಂಜಾನ್ ಹಬ್ಬ ಆಚರಿಸಲಿದ್ದಾರೆ.
ಮಿಲ್ಲರ್ಸ್ ರಸ್ತೆ, ಖುದ್ದೂಸ್ ಶಾ ಈದ್ಗಾ ಮೈದಾನ, ಮೈಸೂರು ರಸ್ತೆ, ಶಿವಾಜಿ ನಗರ, ಕದಿರೇನಹಳ್ಳಿ, ಜಯನಗರ 4ನೇ ಬ್ಲಾಕ್, ಹೆಗಡೆ ನಗರ, ಬನ್ನೇರುಘಟ್ಟರಸ್ತೆಯ ಜುಮ್ಮಾ ಮಸೀದಿ, ಹಾಗೂ ರಾಜೀವ್ ಗಾಂಧಿ ಬಡಾವಣೆಯ ಇಲಾಹಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಜರುಗಲಿದೆ ಎಂದು ಪ್ರಮುಖರು ತಿಳಿಸಿದರು. ಜನರ ಪ್ರಯಾಣಕ್ಕಾಗಿ ಮಾರ್ಗ ಬದಲಾವಣೆ, ಭದ್ರತೆಗಾಗಿ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಂಡಿದೆ.