ವಿದ್ಯಾರ್ಥಿಗಳ ಸೆಳೆಯುವಲ್ಲಿ ಮಾಧ್ಯಮ ಶಿಕ್ಷಣ ವಿಫಲ: ಪ್ರೊ.ವಾನಳ್ಳಿ

KannadaprabhaNewsNetwork |  
Published : May 08, 2025, 12:32 AM IST
ಕಾರ್ಯಾಗಾರ ಉದ್ಘಾಟಿಸುತ್ತಿರುವ ಪ್ರೊ ನಿರಂಜನ ವಾನಳ್ಳಿ | Kannada Prabha

ಸಾರಾಂಶ

ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜನೆಯಲ್ಲಿ ಬುಧವಾರ ಮಂಗಳಗಂಗೋತ್ರಿಯ ಯು.ಆರ್. ರಾವ್‌ ಸಭಾಂಗಣದಲ್ಲಿ ‘ಕನ್ನಡ ಮಾಧ್ಯಮ ಕ್ಷೇತ್ರ ಅವಕಾಶಗಳು ಮತ್ತು ಕೌಶಲ್ಯಗಳು’ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆಗೊಂಡಿತು.

‘ಕನ್ನಡ ಮಾಧ್ಯಮ ಕ್ಷೇತ್ರ ಅವಕಾಶಗಳು ಮತ್ತು ಕೌಶಲ್ಯಗಳು’ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಳ್ಳಾಲಪತ್ರಿಕೋದ್ಯಮ ಶಿಕ್ಷಣ ಮಾಧ್ಯಮ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ವೇತನ ಆಕರ್ಷಣೆ ಮಾಧ್ಯಮ ಕ್ಷೇತ್ರಗಳಲ್ಲಿ ಹೆಚ್ಚಾಗಬೇಕು ಎಂದು ಬೆಂಗಳೂರು ಉತ್ತರ ವಿ.ವಿ. ಕುಲಪತಿ ಪ್ರೊ.ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜನೆಯಲ್ಲಿ ಬುಧವಾರ ಮಂಗಳಗಂಗೋತ್ರಿಯ ಯು.ಆರ್. ರಾವ್‌ ಸಭಾಂಗಣದಲ್ಲಿ ‘ಕನ್ನಡ ಮಾಧ್ಯಮ ಕ್ಷೇತ್ರ ಅವಕಾಶಗಳು ಮತ್ತು ಕೌಶಲ್ಯಗಳು’ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮ ಉದ್ಯೋಗಾಕಾಂಕ್ಷಿಗಳಿಗೆ ಭಾಷೆ ಬಲವಾಗಿ, ಮಾತು ಆಯುಧವಾಗಿ ಇರಬೇಕು. ಸೂಕ್ಷ್ಮತೆ ಕಳೆದುಕೊಂಡ ವ್ಯಕ್ತಿ ಯಾವ ಮಾಧ್ಯಮ ಕ್ಷೇತ್ರದಲ್ಲೂ ದುಡಿಯಲು ಅಸಾಧ್ಯ ಎಂದ ವಾನಳ್ಳಿ, ನಾವು ಕೌಶಲದ ಬಗ್ಗೆ ತುಂಬ ಮಾತನಾಡುತ್ತೇವೆ, ಆದರೆ ಮೌಲ್ಯಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಬದಲಾದ ಕಾಲಘಟ್ಟದಲ್ಲಿ ಭಾಷೆಯನ್ನು ವ್ಯಾಕರಣಬದ್ಧವಾಗಿ ಬರೆಯಬೇಕಾಗಿಲ್ಲ ಎಂಬು ತಪ್ಪು ಕಲ್ಪನೆಯಲ್ಲಿ ನಾವಿದ್ದೇವೆ. ಹವ್ಯಾಸಿ ಪತ್ರಕರ್ತರಾಗಲು ಈಗ ಹಿಂದೆಂದಿಗಿಂತಲೂ ಹೆಚ್ಚು ಅವಕಾಶಗಳಿವೆ ಎಂದ ಅವರು, ದಕ್ಷಿಣ ಕನ್ನಡದ ಅಡುಗೆಯನ್ನು ಜಾಗತೀಕರಣಗೊಳಿಸಿದ ಭಟ್‌ ಆ್ಯಂಡ್‌ ಭಟ್‌ ಯೂಟ್ಯೂಬ್‌ ಚಾನೆಲನ್ನು ಉದಾಹರಣೆ ನೀಡಿ ಇದು ಫ್ರೀಲ್ಯಾನ್ಸ್ ಪತ್ರಿಕೋದ್ಯಮದ ಸಾಧ್ಯತೆಗೆ ನಿದರ್ಶನ ಎಂದರು.

ಮಂಗಳೂರು ವಿ.ವಿ. ಕುಲಸಚಿವ ರಾಜು ಮೊಗವೀರ ಮಾತನಾಡಿ, ಪತ್ರಕರ್ತರು ಸಮಕಾಲೀನ ಇತಿಹಾಸಕಾರರು. ಸತ್ಯ, ಸ್ಪಷ್ಟತೆ, ಸಾಮಾಜಿಕ ಜವಾಬ್ದಾರಿಯನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಸುದ್ದಿ, ಮನರಂಜನೆ ವ್ಯತ್ಯಾಸ ಪತ್ರಕರ್ತರಿಗೆ ಗೊತ್ತಿರಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂದು ವಿದ್ಯಾರ್ಥಿ ಸಮೂಹದಲ್ಲಿ ಸಂವಹನ ಸೂಕ್ಷ್ಮತೆ, ಶಿಷ್ಟಾಚಾರ ಪಾಲನೆ ಮರೆಯಾಗುತ್ತಿದೆ. ನೋಡಿ ಕಲಿಯುವುದನ್ನು ನಾವು ಮರೆತಿದ್ದೇವೆ. ಮಾತುಗಳನ್ನು ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಕೌಶಲ್ಯ ಎಂಬುದು ಹೊರಗಿನಿಂದ ಬರುವುದಲ್ಲ, ರೆಡಿಮೇಡ್ ಕೌಶಲ್ಯ ಎಂಬುದೂ ಇಲ್ಲ. ಅದು ಅನುಸರಿಸುವುದರಿಂದ ಗಮನಿಸುವುದರಿಂದ, ಪ್ರಯೋಗಿಸುವುದರಿಂದ ಬರುತ್ತದೆ. ಭಾಷೆ ಬಳಸದಿದ್ದರೆ ಕೌಶಲ್ಯ ಬೆಳೆಯುವುದಿಲ್ಲ ಎಂದರು.

ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ ಸ್ವಾಗತಿಸಿದರು. ಕಾರ್ಯಾಗಾರ ಸಂಚಾಲಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಪ್ರೊ.ನಾಗಪ್ಪ ಗೌಡ ಆರ್. ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವ ನಿಯಂತ್ರಣದಿಂದ ಏಡ್ಸ್ ದೂರವಿಡಲು ಸಾಧ್ಯ: ತಾರಾ ಯು. ಆಚಾರ್ಯ
ಛಾಯಾಗ್ರಾಹಕರು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು: ಕೇಮಾರು ಶ್ರೀ