ಮಾಧ್ಯಮ ಅಪಾಯದ ಕಾಲಘಟ್ಟದಲ್ಲಿದೆ: ಬೀರಣ್ಣ ನಾಯಕ ಮೊಗಟಾ

KannadaprabhaNewsNetwork | Published : Jul 23, 2024 12:41 AM

ಸಾರಾಂಶ

ಮಾಧ್ಯಮ ಅಪಾಯದ ಕಾಲಘಟ್ಟದಲ್ಲಿದೆ. ದೃಶ್ಯ ಮಾಧ್ಯಮಗಳ ಹಾವಳಿ ನಡುವೆ ಪತ್ರಿಕೆಗಳ ಅಸ್ತಿತ್ವ ಉಳಿಸಿಕೊಡಲು ಶ್ರಮಿಸಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಹೇಳಿದರು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪತ್ರಕರ್ತರು ರಾಜಕಾರಣ, ಓಲೈಕೆ ಮಾಡದೇ ತಮ್ಮತನವನ್ನು ಕಾಯ್ದುಕೊಂಡು ಹೋಗಬೇಕು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ತಿಳಿಸಿದರು.

ಇತ್ತೀಚೆಗೆ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ನೈತಿಕ ಶುದ್ಧತೆ ಇಟ್ಟುಕೊಂಡಲ್ಲಿ ಸಮಾಜದಲ್ಲಿ ಗೌರವ ಸದಾ ಸಿಗುತ್ತದೆ. ಜಿಲ್ಲೆಯಲ್ಲಿ ಪತ್ರಕರ್ತರಿಗೆ ವಿಶೇಷ ಗೌರವ ಇದೆ. ಆದರೆ ಕೆಲವೆಡೆ ನಕಲಿ ಪತ್ರಕರ್ತರ ಹಾವಳಿ ತಲೆ ಎತ್ತುತ್ತಿದ್ದು, ಅದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವ ಕಾರ್ಯ ಆಗಬೇಕು ಎಂದರು.

ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಮಾಧ್ಯಮ ಅಪಾಯದ ಕಾಲಘಟ್ಟದಲ್ಲಿದೆ. ದೃಶ್ಯ ಮಾಧ್ಯಮಗಳ ಹಾವಳಿ ನಡುವೆ ಪತ್ರಿಕೆಗಳ ಅಸ್ತಿತ್ವ ಉಳಿಸಿಕೊಡಲು ಶ್ರಮಿಸಬೇಕು. ಪತ್ರಿಕೆಗಳು ನಿಖರತೆ, ಸ್ಪಷ್ಟತೆ ಪಾರದರ್ಶಕತೆ, ವಿಶ್ವಾಸಾರ್ಹತೆ ಉಳಿಸಿಕೊಡಬೇಕು ಎಂದರು.

ಡಾ. ಸೌಮ್ಯ ಕೆ.ವಿ. ಅವರು ಆರೋಗ್ಯ ಜಾಗೃತಿಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಉಪನ್ಯಾಸ ನೀಡಿ, ಕೊರೋನಾ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಅಪಾರವಾಗಿ ಶ್ರಮಿಸಿವೆ. ಪತ್ರಿಕೆಗಳಲ್ಲಿ ಬರುವ ಆರೋಗ್ಯ ಲೇಖನಗಳು ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯಕಾರಿಯಾಗಿವೆ ಎಂದರು.

ಪತ್ರಕರ್ತ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಮಾತನಾಡಿ, ಪತ್ರಕರ್ತರಿಗೆ ರಕ್ಷಣೆ, ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದೆ ಬರಬೇಕು ಎಂದರು.

ದತ್ತಾತ್ರೇಯ ಭಟ್ಟ ಕಣ್ಣಿಪಾಲ ಮಾತನಾಡಿ, ಪತ್ರಕರ್ತರಿಗೆ ಯಾವುದೇ ಗುರುತಿನ ಚೀಟಿ ಬೇಕಿಲ್ಲ. ತಮ್ಮ ಬರಹದ ಮೂಲಕವೇ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯಲ್ಲಾಪುರದ ಪತ್ರಕರ್ತರು ಮುಂಚೂಣಿಯಲ್ಲಿದ್ದಾರೆ ಎಂದರು.

ಇದೇ ವೇಳೆ ಕವಿ ಪತ್ರಕರ್ತ ಸುಬ್ರಾಯ ಗಾಂವ್ಕಾರ ಬಿದ್ರೆಮನೆ, ಬರಹಗಾರ ದತ್ತಾತ್ರಯ ಕಣ್ಣಿಪಾಲ್, ಸ್ವಚ್ಛತಾ ನಿರ್ವಾಹಕಿ ತುಂಗಮ್ಮ ಪಟಗಾರ, ಪತ್ರಿಕಾ ವಿತರಕರಾದ ದೀಪಕ್ ಕಲಾಲ, ಅಮೃತ ಹೇಂದ್ರೆ ಅವರನ್ನು ಸನ್ಮಾನಿಸಲಾಯಿತು.

ಅಡಿಕೆ ವರ್ತಕ ಸಂಘದ ಅಧ್ಯಕ್ಷ ರವಿ ಹೆಗಡೆ, ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಚಂದಗುಳಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಸವಣಗೇರಿ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ ಇದ್ದರು. ಜಿಲ್ಲಾ ಸಂಘದ ಕಾರ್ಯದರ್ಶಿ ನರಸಿಂಹ ಸಾತೋಡ್ಡಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯೆ ಪ್ರಭಾವತಿ ಗೋವಿ, ತಾಲೂಕು ಸದಸ್ಯರಾದ ವಿಜಯಕುಮಾರ ನಾಯ್ಕ, ಜಯರಾಜ ಗೋವಿ ಅವರು ಸನ್ಮಾನಪತ್ರ ವಾಚಿಸಿದರು.

ಪತ್ರಕರ್ತ ಸಂಘದ ತಾಲೂಕು ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಸವಣಗೇರಿ ಶಾಲೆಯ ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು.

Share this article