ವೈದ್ಯಕೀಯ ಸೇರಿ ಸೇವಾ ಕ್ಷೇತ್ರಗಳು ಉದ್ಯಮವಾಗಿವೆ: ಬಿಜೆಪಿ ಮುಖಂಡ ಅರವಿಂದ್ ಬೇಸರ

KannadaprabhaNewsNetwork | Published : Jul 8, 2024 12:31 AM

ಸಾರಾಂಶ

ಈ ಹಿಂದೆ ವೈದ್ಯರನ್ನು ವೈದ್ಯೋಂ ನಾರಾಯಣ ಹರಿ ಎಂದು ಕರೆದು ದೇವರ ಸ್ವರೂಪಿ ಎಂದು ಭಾವಿಸಿ ಗೌರವಿಸುತ್ತಿದ್ದರು. ಆಧುನಿಕತೆ ಬೆಳೆದಂತೆ ಇಂದು ವೈದ್ಯಕೀಯ ಕ್ಷೇತ್ರ ಸೇರಿ ಇತರೆ ಸೇವಾ ವೃತ್ತಿಗಳು ಉದ್ಯಮಗಳಾಗಿ ಬದಲಾಗುತ್ತಿವೆ. ಹಣವಿದ್ದರೆ ಮಾತ್ರ ಆರೋಗ್ಯ, ಆಯಸ್ಸು ಲಭ್ಯ ಎಂಬಂತಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ, ಶಿಕ್ಷಣ ಸೇರಿ ಎಲ್ಲಾ ಸೇವಾ ಕ್ಷೇತ್ರಗಳೂ ಉದ್ಯಮಗಳಾಗುತ್ತಿವೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಎಚ್.ಮಲ್ಲಿಗೆರೆ ವೃತ್ತದ ಸಮೀಪದ ಬಿ.ಎಲ್.ಎಸ್. ಪ್ರೌಢಶಾಲಾ ಆವರಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ, ಇಂಟರ್ ನ್ಯಾಷನಲ್ ಜನಪರ ಅಲಯನ್ಸ್ ಸಂಸ್ಥೆ, ಜನಸೇವಾ ಅಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ವೈದ್ಯರನ್ನು ವೈದ್ಯೋಂ ನಾರಾಯಣ ಹರಿ ಎಂದು ಕರೆದು ದೇವರ ಸ್ವರೂಪಿ ಎಂದು ಭಾವಿಸಿ ಗೌರವಿಸುತ್ತಿದ್ದರು. ಆಧುನಿಕತೆ ಬೆಳೆದಂತೆ ಇಂದು ವೈದ್ಯಕೀಯ ಕ್ಷೇತ್ರ ಸೇರಿ ಇತರೆ ಸೇವಾ ವೃತ್ತಿಗಳು ಉದ್ಯಮಗಳಾಗಿ ಬದಲಾಗುತ್ತಿವೆ. ಹಣವಿದ್ದರೆ ಮಾತ್ರ ಆರೋಗ್ಯ, ಆಯಸ್ಸು ಲಭ್ಯ ಎಂಬಂತಾಗುತ್ತಿದೆ ಎಂದರು.

ಹಣ ಮಾಡುವ ಬಹುತೇಕ ವೈದ್ಯರ ನಡುವೆ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಆರೋಗ್ಯವನ್ನು ರಕ್ಷಿಸುವ ಸಾಕಷ್ಟು ವೈದ್ಯರು ನಮ್ಮ ನಡುವೆ ಇದ್ದಾರೆ. ಇಂಥವರು ಬೆಳಕಿಗೆ ಬರಬೇಕಿದೆ. ಇವರಿಗೆ ಸಂಘ ಸಂಸ್ಥೆಗಳ ಗೌರವ ಲಭ್ಯವಾಗಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಸಾಕಷ್ಟು ಬಡವರಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡುವುದು ವೃತ್ತಿಯ ಧರ್ಮ. ಒಂದಷ್ಟು ಸೇವಾಕಾರ್ಯಗಳು ಸಮಾಜಕ್ಕೆ ವೈದ್ಯರಿಂದ ಲಭ್ಯವಾಗಲಿ. ಆರೋಗ್ಯವಂತ ಸಮಾಜ ನಿರ್ಮಾಣ ನಿಮ್ಮಿಂದ ಸಾಧ್ಯವಿದೆ ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳೇ.. ಇತ್ತೀಚಿನ ದಿನಗಳಲ್ಲಿ ಡೆಂಘೀ, ಚಿಕುನ್‌ಗುನ್ಯಾ ರೋಗಗಳು ಹೆಚ್ಚಾಗುತ್ತಿವೆ. ನಿರ್ಲಕ್ಷ್ಯ ಮಾಡದೇ ಜಾಗೃತಿ ವಹಿಸಬೇಕು. ಪೋಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಬಳಿಕ ದಂತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು.

ಕಾರ್ಯಕ್ರಮದಲ್ಲಿ ವೇದಿಕೆ ರಾಜ್ಯಘಟಕ ಅಧ್ಯಕ್ಷ ಪೋತೇರ ಮಹದೇವು, ವಕೀಲ ಎಂ.ಗುರುಪ್ರಸಾದ್, ಇಂಟರ್ ನ್ಯಾಷನಲ್ ಜನಪರ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವೈ.ಎಚ್.ರತ್ಮಮ್ಮ, ಜನಸೇವಾ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಶೈಲಜಾ ಶಿವಕುಮಾರ್, ವೈದ್ಯರಾದ ಡಾ.ಸುಕನ್ಯ, ಡಾ.ಎಚ್.ಸಿ.ಆನಂದ್, ಡಾ.ರಕ್ಷಾ, ಶಾಲಾ ಮುಖ್ಯಶಿಕ್ಷಕ ಎಂ.ಲಿಂಗರಾಜು, ಗಾಯಿತ್ರಿ ಇದ್ದರು.

Share this article