ಹುಬ್ಬಳ್ಳಿ:
ನಗರದ ಸುಧರ್ಮ ಸಭಾಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ವೃತ್ತಿ ನಿರತರಾಗಿರುವ ವಿವಿಧ ವಿಭಾಗಗಳ 30ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡು ಸಮಾಜಮುಖಿ ವೈದ್ಯಕೀಯ ಸೇವೆಗಳ ಕುರಿತು ಚರ್ಚಿಸಿದರು.
ಹಿರಿಯ ವೈದ್ಯ ಹಾಗೂ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಶ್ಯಾಮಸುಂದರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಭಾಸ್ಕರ ಪಾಟೀಲ, ಡಾ. ಎ.ಎಸ್. ಪ್ರಶಾಂತ್ ಹಾಗೂ ಡಾ. ಆರ್.ಎನ್. ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಚುನಾಯಿತ ಪ್ರತಿನಿಧಿ ಲಕ್ಷ್ಮಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿಪ್ರ ಸಮಾಜದವರಿಗೆ ವೈದ್ಯರಿಂದ ಸಾಧ್ಯವಾಗುವ ಗರಿಷ್ಠ ನೆರವು ಒದಗಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ವೈದ್ಯರು ತಮ್ಮ ಅನುಭವದ ಆಧಾರದಲ್ಲಿ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಡಾ. ಭಾಸ್ಕರ ಪಾಟೀಲ ಮಾತನಾಡಿ, ಗೋಕುಲ ರಸ್ತೆಯ ಬ್ರಾಹ್ಮಣ ಸಂಘದ ವತಿಯಿಂದ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶೈಕ್ಷಣಿಕ ಧನಸಹಾಯ ನೀಡಲಾಗುತ್ತಿದ್ದು, ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.
ಡಾ. ಆರ್.ಎನ್. ಜೋಶಿ, ಡಾ. ಸುಹಾಸ ಕಲಘಟಗಿ ಸೇರಿದಂತೆ ಹಲವು ವೈದ್ಯರು ವಿಪ್ರ ವೈದ್ಯರ ಸಂಘಟನೆ ಬಲಪಡಿಸುವುದು ಹಾಗೂ ಸಮಾಜದ ಅರ್ಹರಿಗೆ ವೈದ್ಯಕೀಯ ಸೇವೆ ತಲುಪಿಸುವ ಕುರಿತು ಸಲಹೆ ನೀಡಿದರು.