ಹೊಸ ಡಿಸಿ ಕಚೇರಿಯಲ್ಲಿಯೇ ವೈದ್ಯಕೀಯ ಕಾಲೇಜು

KannadaprabhaNewsNetwork |  
Published : Apr 08, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಂಗಳವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಹೊರವಲಯದ ಕುಂಚಿಗನಾಳ್ ಗುಡ್ಡದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ಬಳಸಿಕೊಳ್ಳಲಾಗುವುದು. ಈ ಸಂಬಂಧ ಇಲಾಖೆ ಮಟ್ಟದಲ್ಲಿ ಮಾತುಕತೆ ನಡೆದು ಒಪ್ಪಿಗೆ ಸೂಚಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಮಂಗಳವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಾಣ ಆಗುತ್ತಿರುವ ವೈದ್ಯಕೀಯ ಕಾಲೇಜು ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಿದ ನಂತರ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿಗಾಗಿಯೇ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಕಂದಾಯ ಇಲಾಖೆ ಒಪ್ಪಿಗೆ ಸೂಚಿಸಿದೆ. ಆಸ್ಪತ್ರೆ ಹಿಂಭಾಗದಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ನರ್ಸಿಂಗ್ ಕಾಲೇಜು, ಪಿಜಿಯೋಥೆರಪಿ ಸೇರಿದಂತೆ ಪಿಡಿಯಾಟ್ರಿಕ್ ವಿಭಾಗಕ್ಕೆ ಬಳಸಿಕೊಳ್ಳಲಾಗುವುದು. ಇದೆಲ್ಲ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಸಮಯ ಬೇಕಾಗಬಹುದು. ಅಲ್ಲಿಯವರೆಗೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತರಗತಿಗಳು ನಡೆಯಲಿವೆ ಎಂದರು.

ದಾವಣಗೆರೆ ಚುನಾವಣೆ ಪ್ರಚಾರ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವ ದಾರಿಮಧ್ಯೆ ಚಿತ್ರದುರ್ಗದ ವೈದ್ಯಕೀಯ ಕಾಲೇಜು ಕಾಮಗಾರಿ ವೀಕ್ಷಿಸಲು ಬಂದಿದ್ದೇನೆ. ಇಲಾಖೆಯಲ್ಲಿ ಕಾಮಗಾರಿಗೆ ಯಾವುದೇ ಹಣದ ಕೊರತೆ ಇಲ್ಲ. ಬಿಲ್‌ಗಳ ಬಾಕಿಯೂ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸಮಸ್ಯೆಗೆ ರೋಗಿಗಳು ರೋಸಿ ಹೋಗಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಎಂಬ ಪ್ರಶ್ನೆಗೆ ನಿವಾರಣೆಗೆ ಜಿಲ್ಲಾ ಶಸ್ತ್ರ ಚಿಕ್ಸಿತಕರಿಗೆ ಸೂಚಿಸಲಾಗಿದೆ ಎಂದರು.

ಕಾಮಗಾರಿ ವೀಕ್ಷಿಸಿದ ನಂತರ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ವಾರ್ಡ್‌ಗಳಿಗೂ ಹೋಗಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ಆರ್ಥೋಪೆಡಿಕ್ ವಾರ್ಡಿಗೂ ಭೇಟಿ ನೀಡಿ ಆರೋಗ್ಯ ಸಿಬ್ಬಂದಿಯವರ ಕಾರ್ಯವೈಖರಿ ಬಗ್ಗೆ ವಿಚಾರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಯುವರಾಜ್, ಶುಶ್ರೂಷಾಧೀಕ್ಷಕಿ ಶಾಂತಮ್ಮ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಪ್‌ ಚುಪ್‌ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ನನಗೆ ಸುಪ್ರೀಂ ಕೋರ್ಟಿನಲ್ಲಿ ಜಯ: ಕೊಂಡವಾಡಿ ಚಂದ್ರಶೇಖರ್