ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ್ ಸಾಲ್ಡಾನಗೆ ಅಭಿನಂದನಾ ಸಮಾರಂಭ
ವೈದ್ಯಕೀಯ ವೃತ್ತಿ ಜಾತ್ಯಾತೀತವಾಗಿದ್ದು, ಜೀವರಾಶಿಯ ಪ್ರಾಣವನ್ನು ಸಂರಕ್ಷಿಸುವ ಕ್ಷೇತ್ರ, ಕಾಯಕದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಿರಂತರವಾಗಿ ಮುನ್ನಡೆಯಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅತ್ಯುತ್ತಮ ವೈದ್ಯ ಪ್ರಶಸ್ತಿ ಸ್ವೀಕರಿಸಿದ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ್ ಸಾಲ್ಡಾನ ಅವರಿಗೆ ಮಂಗಳವಾರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪ್ರಪಂಚವೇ ಕೊರೋನಾದಿಂದ ಬಳಲುತ್ತಿರುವ ಸಂದರ್ಭದಲ್ಲಿ ವೈದ್ಯರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ತಿಂಗಳುಗಟ್ಟಲೇ ಕುಟುಂಬ ತೊರೆದು ಜನಸಾಮಾನ್ಯರ ಬದುಕಿಗಾಗಿ ಹೋರಾಡಿದವರು ಎಂದು ಹೇಳಿದರು.
ಬಿಜೆಪಿ ರಾಜ್ಯ ಎಸ್‌ಸಿ ಘಟಕದ ಕಾರ್ಯದರ್ಶಿ ಸೀತರಾಮ ಭರಣ್ಯ ಮಾತನಾಡಿ, ವೈದ್ಯರ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಅತ್ಯುತ್ತಮ ವೈದ್ಯರೆಂಬ ಪ್ರಶಸ್ತಿ ನೀಡಿ ಡಾ.ಮನೋಜ್ ರನ್ನು ಗೌರವಿಸಿರುವುದು ಜಿಲ್ಲೆಗೆ ಕೀರ್ತಿ ತಂದಿದೆ. ಜೊತೆಗೆ ಹಿರೇಮಗಳೂರು ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಸ್ಥರಿಗೆ ಇನ್ನಷ್ಟು ಖುಷಿ ನೀಡಿದೆ ಎಂದರು.