ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಇರಿದ ಮೆಡಿಕಲ್‌ ರೆಪ್‌

KannadaprabhaNewsNetwork |  
Published : Sep 20, 2025, 02:05 AM IST

ಸಾರಾಂಶ

ತನ್ನ ಜತೆ ಲೈಂಗಿಕ ಕ್ರಿಯೆಗೆ ಒಪ್ಪದ ಪಶ್ಚಿಮ ಬಂಗಾಳ ಮೂಲದ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಔಷಧ ಮಾರಾಟ ಪ್ರತಿನಿಧಿಯೊಬ್ಬನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಜತೆ ಲೈಂಗಿಕ ಕ್ರಿಯೆಗೆ ಒಪ್ಪದ ಪಶ್ಚಿಮ ಬಂಗಾಳ ಮೂಲದ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಔಷಧ ಮಾರಾಟ ಪ್ರತಿನಿಧಿಯೊಬ್ಬನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್ ಸಮೀಪ ಪಿಜಿ ನಿವಾಸಿ ಸಾಯಿ ಬಾಬು ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ತನ್ನ ಪಿಜಿಯಲ್ಲೇ ನೆಲೆಸಿರುವ ಯುವತಿಗೆ ಚಾಕುವಿನಿಂದ ಇರಿದು 14 ಸಾವಿರ ರು.ಹಣವನ್ನು ಸಹ ಆತ ದೋಚಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಕಡಪ ಮೂಲದ ಸಾಯಿಬಾಬು, ನಗರದಲ್ಲಿ ಔಷಧ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ವೈಟ್‌ಫೀಲ್ಡ್ ಸಮೀಪದ ಪಿಜಿಯಲ್ಲಿ ಬಾಬು ನೆಲೆಸಿದ್ದು, ಅದೇ ಪಿಜಿಯಲ್ಲಿ ಮೂರು ತಿಂಗಳಿಂದ ಪಶ್ಚಿಮ ಬಂಗಾಳ ಮೂಲದ ಯುವತಿ ಸಹ ನೆಲೆಸಿದ್ದಾಳೆ. ಒಂದೇ ಪಿಜಿಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ ಅವರು ಪರಸ್ಪರ ಪರಿಚಿತರಾಗಿದ್ದರು.

ಕೆಲ ದಿನಗಳ ಹಿಂದೆ ಪಿಜಿ ಲಿಫ್ಟ್ ನಲ್ಲಿ ಹೋಗುವಾಗ ಆಕೆಯಿಂದ ಮೊಬೈಲ್ ಸಂಖ್ಯೆಯನ್ನು ಆರೋಪಿ ಪಡೆದಿದ್ದ. ಬಳಿಕ ಪದೇ ಪದೇ ಸಂತ್ರಸ್ತೆಗೆ ಕಾಲ್ ಮಾಡಿ ಕಿರಿಕಿರಿ ಮಾಡುತ್ತಿದ್ದ. ಇದರಿಂದ ಬಾಬು ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದಳು. ಹೀಗಿರುವಾಗ ಎರಡು ದಿನಗಳ ಹಿಂದೆ ಏಕಾಏಕಿ ಸಂತ್ರಸ್ತೆ ರೂಮಿಗೆ ನುಗ್ಗಿದ ಆರೋಪಿ, ಚಾಕು ತೋರಿಸಿ ಬೆದರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ.

ಇದಕ್ಕೆ ಆಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಚಾಕುವಿನಿಂದ ಆತ ಇರಿದಿದ್ದಾನೆ. ಬಳಿಕ 70 ಸಾವಿರ ರು.ಗೆ ಹಣಕ್ಕೆ ಬಾಬು ಬೇಡಿಕೆ ಇಟ್ಟಿದ್ದ. ಕೊನೆಗೆ ಸಂತ್ರಸ್ತೆಯ ಮೊಬೈಲ್ ಅನ್ನು ಬಲವಂತದಿಂದ ಕಸಿದುಕೊಂಡು ಗೂಗಲ್ ಪೇ ಮೂಲಕ 14 ಸಾವಿರ ಹಣವನ್ನು ತನ್ನ ಖಾತೆಗೆ ಆತ ವರ್ಗಾಯಿಸಿಕೊಂಡಿದ್ದ. ತರುವಾಯ ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬಾಬು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ