ಗದಗ: ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಶಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಮೆಡಿವಿಜನ್ ಎಂಬ 3 ದಿನಗಳ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಚಾಲನೆ ನೀಡಿದರು.
ಮೆಡಿವಿಜನ್ 2025– ವೈದ್ಯಕೀಯ ವಿಜ್ಞಾನ ವಸ್ತುಪ್ರದರ್ಶನ, ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಯಿತು. 3 ದಿನ ನಡೆಯುವ ವಸ್ತು ಪ್ರದರ್ಶನದಲ್ಲಿ ಸೋಮವಾರ 8200 ಮಕ್ಕಳು ಭಾಗವಹಿಸಿದ್ದರು.ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆತಂದಿದ್ದರು. ಕಣ್ಣು, ಮೂಗು, ಬಾಯಿ, ಕಿವಿ ಸೇರಿದಂತೆ ಇಡೀ ದೇಹದ ಸಂಕೀರ್ಣ ರಚನೆಗಳನ್ನು ಯುವ ವೈದ್ಯರು ವಿದ್ಯಾರ್ಥಿಗಳಿಗೆ ಸರಳವಾಗಿ ತಿಳಿಸಿಕೊಟ್ಟರು.
ವೈದ್ಯರ ವಿವರಣೆಯನ್ನು ಮಕ್ಕಳು ಆಸಕ್ತಿಯಿಂದ ಕೇಳಿ, ತಿಳಿದುಕೊಂಡರು. ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಘೋಷ ವಾಕ್ಯ ''''ಸರ್ವಜನೋ ಅರೋಗ್ಯಂ ಭವತು'''' ಎಂಬುದಾಗಿದ್ದು, ಸರ್ವರೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಲು ತಿಳುವಳಿಕೆ ಮೂಡಿಸುವಲ್ಲಿ ಪ್ರದರ್ಶನ ಯಶಸ್ವಿಯಾಯಿತು.ಜನರಲ್ ಮೆಡಿಸನ್, ಮನೋವೈದ್ಯಕೀಯ, ಸರ್ಜರಿ, ಇಎನ್‌ಟಿ, ರಕ್ತ, ಕರಳು, ಕಿಡ್ನಿ, ಮೂಳೆ ಮತ್ತು ಎಲುಬು, ಅನಾಟಮಿ, ಪ್ರಸೂತಿ ಮತ್ತು ಹೆರಿಗೆ ಸೇರಿದಂತೆ ವೈದ್ಯಕೀಯ ವಿಜ್ಞಾನದಲ್ಲಿರುವ ಅಷ್ಟು ಶಾಖೆಗಳ ವಿವರಣೆ ನೀಡಲು ಪ್ರತ್ಯೇಕ ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ಮಾದರಿಗಳನ್ನು ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಜ್ಞಾನ ಹಂಚುವುದರ ಜತೆಗೆ ವೈದ್ಯಕೀಯ ಅಭ್ಯಾಸ ಮಾಡುತ್ತಿರುವ ಯುವ ವೈದ್ಯರ ಕಲಿಕೆಗೂ ಪೂರಕವಾಗಿತ್ತು.
ಮಾದರಿ ತೋರಿಸಿ ವಿವರಣೆ ನೀಡಿದ್ದರಿಂದಾಗಿ ಮಕ್ಕಳ ಆಸಕ್ತಿಯೂ ಹಿಗ್ಗಿತ್ತು. ಮೆಡಿವಿಜನ್‌ನಲ್ಲಿ ಮಾನವ ಶರೀರ ರಚನೆ, ನೈಜ ಅಂಗಾಂಗಗಳ ಪ್ರದರ್ಶನ, ಶರೀರ ಕ್ರಿಯೆ-ತಿಳಿವಳಿಕೆ, ಆರೋಗ್ಯದ ಬಗ್ಗೆ ಮಾಹಿತಿ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಕಾಯಿಲೆ, ಥೈರಾಯ್ಡ್ ಇನ್ನಿತರೆ ಕಾಯಿಲೆಗಳ ಬಗ್ಗೆ ತಿಳಿವಳಿಕೆ, ಆಧುನಿಕ ವೈದ್ಯಕೀಯ ಉಪಕರಣಗಳ ಪ್ರದರ್ಶನ, ಆಹಾರ ಬಗ್ಗೆ ಅರಿವು ಮೂಡಿಸುವ ವೈಶಿಷ್ಟ್ಯಗಳು ಕಂಡು ಬಂದವು. ಮಕ್ಕಳಿಗೆ ವೈದ್ಯಕೀಯ ವಿಜ್ಞಾನಗಳ ಬಗ್ಗೆ ಆಸಕ್ತಿ ಮೂಡಿಸುವುದು. ಸದೃಢ ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ಮಕ್ಕಳಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ. ಭವಿಷ್ಯದಲ್ಲಿ ವೈದ್ಯರಾಗುವ ಕನಸುಗಳಿಗೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ವೇಳೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಪ ಶಾಸಕ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ವಾಸಣ್ಣ ಕೂರಡಗಿ, ಎಸ್.ಎನ್.ಬಳ್ಳಾರಿ, ಕೆ.ಎಸ್.ಪಾಟೀಲ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರಿಗೌಡರ, ಡಿಡಿಪಿಐ ಆರ್.ಎಸ್. ಬುರಡಿ ಹಾಗೂ ಸಂಸ್ಥೆಯ ಬೋಧಕ, ಬೋದಕೇತರ ಸಿಬ್ಬಂದಿಗಳು ಇದ್ದರು.