ಚಾಲಕನ ಪುತ್ರಿಗೆ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು

KannadaprabhaNewsNetwork |  
Published : Sep 02, 2026, 03:45 AM IST
ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ: ಪ್ರೊ. ಸದಾಕತ್ | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೂತನ ಶೈಕ್ಷಣಿಕ ಅಧ್ಯಾಯಕ್ಕೆ ಸಾಕ್ಷಿಯಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ (ಎಐಎಂಎಸ್‌ಆರ್‌ಸಿ) ಮೊದಲ ಎಂಬಿಬಿಎಸ್ ಪ್ರವೇಶದ ಹೆಗ್ಗಳಿಕೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ಪಾತ್ರರಾಗಿದ್ದಾರೆ.

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೂತನ ಶೈಕ್ಷಣಿಕ ಅಧ್ಯಾಯಕ್ಕೆ ಸಾಕ್ಷಿಯಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ (ಎಐಎಂಎಸ್‌ಆರ್‌ಸಿ) ಮೊದಲ ಎಂಬಿಬಿಎಸ್ ಪ್ರವೇಶದ ಹೆಗ್ಗಳಿಕೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ಪಾತ್ರರಾಗಿದ್ದಾರೆ. ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆದಿರುವ ಸ್ನೇಹಾ, ಸೀಮಿತ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದು ಶೈಕ್ಷಣಿಕ ಪರಿಶ್ರಮ, ಅವಕಾಶ ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ.ಕಾರ್ಕಳದ ಕುಂಟಲ್ಪಾಡಿಯ ನಿವಾಸಿಯಾಗಿರುವ ಸ್ನೇಹಾ, ತನ್ನ ಎಸ್‌ಎಸ್‌ಎಲ್‌ಸಿಯನ್ನು ಜೆಸೀಸ್ ಹೈಸ್ಕೂಲ್‌ನಲ್ಲಿ 590 ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು. ಬಳಿಕ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸೇರಿ, ಆಳ್ವಾಸ್‌ನ ಮೆರಿಟ್ ಅಡಾಪ್ಷನ್ ಸ್ಕೀಮ್ (ದತ್ತು ಯೋಜನೆ) ಅಡಿಯಲ್ಲಿ ಶಿಕ್ಷಣ ಮುಂದುವರಿಸಿದ್ದರು.

ಆಳ್ವಾಸ್‌ನಲ್ಲಿ ಪಡೆದ ಶೈಕ್ಷಣಿಕ ತರಬೇತಿ, ನಿರಂತರ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಫಲವಾಗಿ ಸ್ನೇಹಾ ನೀಟ್‌ನಲ್ಲಿ 720ಕ್ಕೆ 506 ಅಂಕಗಳನ್ನು ಗಳಿಸಿ, ಆಳ್ವಾಸ್ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ.

ತಂದೆಯ ಕನಸು ನನಸು:

ಸ್ನೇಹಾಳ ತಂದೆ ಮಂಜುನಾಥ್ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕಳೆದ 12 ವರ್ಷಗಳಿಂದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ವನಜಾ ಗೃಹಿಣಿ. ಕಿರಿಯ ಸಹೋದರಿ ಸಹನಾ ಕಾರ್ಕಳದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಎಂಬಿಬಿಎಸ್ ಶಿಕ್ಷಣ ಆರಂಭಿಸುತ್ತಿರುವ ಸ್ನೇಹಾ, ಮುಂದೆ ಹೃದ್ರೋಗ ತಜ್ಞೆಯಾಗುವ ಗುರಿ ಹೊಂದಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಕಾಣದೆ, ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಮಾಧ್ಯಮವಾಗಿ ಬಳಸಬೇಕು ಎಂಬುದು ಅವರ ಆಶಯ.ಡಾ. ಮೋಹನ್ ಆಳ್ವಾ ಅವರನ್ನು ತಮ್ಮ ಆದರ್ಶವಾಗಿ ಪರಿಗಣಿಸಿರುವ ಅವರು, ಭವಿಷ್ಯದಲ್ಲಿ ತಾನು ವೈದ್ಯೆಯಾಗಿ ಸ್ಥಿರವಾದ ಬಳಿಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಕಲ್ಪಿಸುವ ಆಶಯ ಹೊಂದಿದ್ದಾರೆ.ಸ್ನೇಹಾಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿ ಅಭಿನಂದಿಸಿದರು.

ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಡೀನ್ ಡಾ. ಮಹಾಬಲ ಶೆಟ್ಟಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ಸ್ನೇಹಾಳ ತಂದೆ ಮಂಜುನಾಥ್ ಹಾಗೂ ತಾಯಿ ವನಜಾ ಉಪಸ್ಥಿತರಿದ್ದರು.ಪ್ರತಿಭಾವಂತ ವಿದ್ಯಾರ್ಥಿಯ ಶಿಕ್ಷಣಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು ಎಂಬುದು ಆಳ್ವಾಸ್‌ನ ಆಶಯ. ಸ್ನೇಹಾಳಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವುದು ನಮ್ಮ ದತ್ತು ಯೋಜನೆಯ ಉದ್ದೇಶ. ಮುಂದಿನ ದಿನಗಳಲ್ಲಿ ಉತ್ತಮ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂಬುದು ನಮ್ಮ ಹಾರೈಕೆ,’। ಡಾ ಎಂ ಮೋಹನ್ ಆಳ್ವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗೆ ಹೆಚ್ಚಿನ ಆದ್ಯತೆ ಉತ್ತಮ ಬೆಳವಣಿಗೆ: ಸಿ.ಎಲ್.ಸುಬ್ಬಯ್ಯ
ಮೌಂಟ್ ಫುಜಿ ಶಿಖರದಲ್ಲಿ ಹಾರಿದ ತ್ರಿವರ್ಣ ಧ್ವಜ