ಆನ್‌ಲೈನ್‌ ಔಷಧ ಮಾರಾಟ ಖಂಡಿಸಿ ಮೆಡಿಕಲ್‌ ವ್ಯಾಪಾರಸ್ಥರಿಂದ ಪ್ರತಿಭಟನೆ

KannadaprabhaNewsNetwork |  
Published : May 21, 2026, 02:15 AM IST
20ಎಚ್‌ವಿಆರ್‌1- | Kannada Prabha

ಸಾರಾಂಶ

ಆನ್‌ಲೈನ್ ಹಾಗೂ ಇ ಫಾರ್ಮಸಿ ಮೂಲಕ ಔಷಧ ವ್ಯಾಪಾರ ನಡೆಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಜಿಲ್ಲಾದ್ಯಂತ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಆನ್‌ಲೈನ್ ಹಾಗೂ ಇ-ಫಾರ್ಮಸಿ ಮೂಲಕ ಔಷಧ ವ್ಯಾಪಾರ ನಡೆಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಜಿಲ್ಲಾದ್ಯಂತ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎಂ.ಜಿ. ರಸ್ತೆ ಮೂಲಕ ಹೊರಟು ಹುತಾತ್ಮ ಮೈಲಾರ ಮಹದೇವಪ್ಪ ವೃತ್ತವನ್ನು ತಲುಪಿತು. ಆನ್‌ಲೈನ್ ಮೂಲಕ ಔಷಧಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಕೇಲಗಾರ ಮಾತನಾಡಿ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ದೇಶಾದ್ಯಂತ ಎಲ್ಲ ಔಷಧ ವ್ಯಾಪಾರ ಮಳಿಗೆ ಬಂದ್ ಮಾಡಿದ್ದು, ಜಿಲ್ಲೆಯಲ್ಲೂ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೇವೆ. ದೇಶದಲ್ಲಿ ನಡೆಯುತ್ತಿರುವ ಆನ್‌ಲೈನ್ ಮೂಲಕ ಔಷಧ ವ್ಯಾಪಾರ ನಿಲ್ಲಿಸಬೇಕು. ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ವಿನಾಯಿತಿ ವ್ಯಾಪಾರ ನಿಲ್ಲಿಸಬೇಕು. ನಕಲಿ ಔಷಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

ರೋಗಿಗಳ ಸುರಕ್ಷತೆ, ನಕಲಿ ಔಷಧಿಗಳ ಭೀತಿ, ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನೀಡುವ ಅತಿಯಾದ ರಿಯಾಯಿತಿಗಳಿಂದ ಸ್ಥಳೀಯ ವ್ಯಾಪಾರಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ ಅಥವಾ ಒಂದೇ ಚೀಟಿ ಬಳಸಿ ಪದೇ ಪದೇ ಔಷಧ ಖರೀದಿ ಮಾಡುವುದರಿಂದ ಅಪಾಯ ಹೆಚ್ಚಿದೆ. ಇ-ಫಾರ್ಮಸಿಗಳ ಮೇಲೆ ಸರ್ಕಾರದಿಂದ ಸರಿಯಾದ ನಿಯಂತ್ರಣವಿಲ್ಲ. ನಾವು ಯಾರಿಗೆ ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ನೀಡುತ್ತೇವೆ. ಆದರೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಔಷಧ ಮಾರಾಟದ ಯಾವುದೇ ಮಾಹಿತಿ ನೀಡುವುದಿಲ್ಲ. ಕಾರಣ ಸಮಾಜದ ಮೇಲೆ ಅಡ್ಡಪರಿಣಾಮ ಉಂಟಾಗುತ್ತಿದೆ. ಹಾಗಾಗಿ, ಸರ್ಕಾರ ಆನ್‌ಲೈನ್ ಹಾಗೂ ಇ-ಫಾರ್ಮಸಿ ಮೂಲಕ ಔಷಧ ವ್ಯಾಪಾರ ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಶರದ ಕುದರಿ ಮಾತನಾಡಿ, ಜಿಲ್ಲೆಯಲ್ಲಿ 700 ಔಷಧ ಮಾರಾಟ ಮಳಿಗೆಗಳು ನೋಂದಣಿಯಾಗಿದ್ದು, ಪ್ರಸ್ತುತ 600ಕ್ಕೂ ಅಧಿಕ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಸಾಗಾಟದಲ್ಲಿ ವಿಳಂಬದಿಂದ ಅಗತ್ಯ ಔಷಧಗಳ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿವೆ. ಜತೆಗೆ ದರದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಸರ್ಕಾರಗಳು ಆನ್‌ಲೈನ್ ಹಾಗೂ ಇ-ಫಾರ್ಮಸಿ ಮೂಲಕ ಔಷಧ ವ್ಯಾಪಾರ ನಡೆಸುವುದನ್ನು ನಿಯಂತ್ರಿಸಿ ಔಷಧ ವ್ಯಾಪಾರಿಗಳಿಗೆ ಬಲ ತುಂಬುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರಾಜೇಂದ್ರ ಇರಕಲ್ಲ, ಖಜಾಂಚಿ ರಾಜೇಶ್ ಲೊಡಾಯಿ, ಹಾವೇರಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿದ್ದಣ್ಣ ಮೆಣಸಿನಹಾಳ, ಹಾವೇರಿ ತಾಲೂಕು ಔಷಧ ಸಂಘದ ಕಾರ್ಯದರ್ಶಿ ಸುಬ್ರಮಣ್ಯ ಉದ್ದಗಟ್ಟಿ, ನೀಲಕಂಠ ನಾಡಿಗೇರ, ಗೋಪಣ್ಣ, ಹನುಮಂತ ಕಲಾಲ, ಬಿ.ಎಸ್. ಪಾಟೀಲ, ಆದರ್ಶ ಬಶೆಟ್ಟಿ ಸೇರಿದಂತೆ ಅನೇಕ ವ್ಯಾಪಾರಿಗಳು ಹಾಜರಿದ್ದರು.ಮೆಡಿಕಲ್ ಶಾಪ್ ಬಂದ್

ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಬಹುತೇಕ ಮೆಡಿಕಲ್ ಶಾಪ್‌ಗಳು ಬಾಗಿಲು ಹಾಕಿದ್ದವು. ಹೀಗಾಗಿ, ಅಗತ್ಯ ಔಷಧಿಗಳನ್ನು ಖರೀದಿಸಲು ಗ್ರಾಹಕರು ಪರದಾಡುವಂತಾಯಿತು. ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಮೆಡಿಕಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಗತ್ಯ ಔಷಧಿಗಳನ್ನು ಖರೀದಿಸಲು ಗ್ರಾಹಕರು ಜನೌಷಧಿ ಕೇಂದ್ರಗಳತ್ತ ಮುಖ ಮಾಡುವುದು ಸಾಮಾನ್ಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾಪಟುಗಳು ತಾಲೂಕಿಗೆ ಕೀರ್ತಿ ಹೆಚ್ಚಿಸಿ
ಪುರಸಭೆ ಅಧ್ಯಕ್ಷರ ವಿರುದ್ಧ ಮುಖ್ಯಾಧಿಕಾರಿ ಪ್ರತಿಭಟನೆ