ವೈದ್ಯಕೀಯ ಕೇವಲ ಉದ್ಯೋಗವಲ್ಲ, ಸೇವಾ ಧರ್ಮ

KannadaprabhaNewsNetwork |  
Published : Nov 09, 2025, 02:15 AM IST
ಕ್ಯಾಪ್ಷನ8ಕೆಡಿವಿಜಿ41 ದಾವಣಗೆರೆಯಲ್ಲಿಂದು ನಡೆದ ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದು ದಯೆ, ನಿಷ್ಠೆ ಮತ್ತು ನಿಪುಣತೆ ಸೇವೆಯ ಧರ್ಮ ಎಂದು ಸಂಸದೆ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಮತ । ದಾವಣಗೆರೆಯಲ್ಲಿ ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದು ದಯೆ, ನಿಷ್ಠೆ ಮತ್ತು ನಿಪುಣತೆ ಸೇವೆಯ ಧರ್ಮ ಎಂದು ಸಂಸದೆ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬಸವಣ್ಣನವರು ಹೇಳಿದಂತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೈದ್ಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ನಮಗೆ ನಾವು ಆತ್ಮಸಾಕ್ಷಿಯಂತೆ ಬದ್ಧವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜು 1965ರಿಂದ ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಜೆಜೆಎಂ ವೈದ್ಯಕೀಯ ಕಾಲೇಜು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ಕ್ಲಿನಿಕ್‌ಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನಾ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಆರೋಗ್ಯ ಕ್ಷೇತ್ರಕ್ಕೆ ನೂತನ ಶಕ್ತಿ:

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಹೊಸ ಸಂಶೋಧನೆಗಳ ಮಹತ್ವವನ್ನು ಕುರಿತು ಮಾತನಾಡಿದ ಸಂಸದರು. ಟೆಲಿಮೆಡಿಸಿನ್ ಮತ್ತು ಕೃತಕ ಬುದ್ಧಿಮತ್ತೆ (AI) ಭವಿಷ್ಯದ ವೈದ್ಯಕೀಯ ಸೇವೆಯ ಕೇಂದ್ರವಾಗಲಿದೆ. ಕೇಂದ್ರ ಸಚಿವ ಸಂಪುಟವು 2028–29ರೊಳಗೆ 10,023 ಹೊಸ ವೈದ್ಯಕೀಯ ಸೀಟ್ ಲಭ್ಯ ಆಗುವಂತೆ ಕ್ರಮವಹಿಸಿದೆ. ಅದರಲ್ಲಿ 5,023 ಎಂಬಿಬಿಎಸ್ ಹಾಗೂ 5,000 ಪಿಜಿ ಸ್ಥಾಪನೆಗೆ ₹15,000 ಕೋಟಿ ಮಂಜೂರು ನೀಡಿದೆ. ಇದು ಭಾರತದ ಆರೋಗ್ಯ ಕ್ಷೇತ್ರಕ್ಕೆ ನೂತನ ಶಕ್ತಿ ನೀಡಲಿದೆ ಎಂದು ಹೇಳಿದರು.

ಅಮೆರಿಕನ್ ವೈದ್ಯರಾದ ಪ್ಯಾಚ್ ಆಡಮ್ಸ್ ಅವರ ನುಡಿಗಳಾದ “ವೈದ್ಯರ ಗುರಿ ಕೇವಲ ಮರಣ ತಡೆಯುವುದಲ್ಲ, ಜೀವನದ ಗುಣಮಟ್ಟ ಸುಧಾರಿಸುವುದಾಗಿದೆ” ಎಂಬ ಉಲ್ಲೇಖವನ್ನು ಈ ವೇಳೆ ಸಂಸದರು ನೆನಪಿಸಿದರು. ನಿಮ್ಮ ಮುಂದಿನ ಪ್ರಯಾಣ ಶ್ರೇಷ್ಠತೆ ಮತ್ತು ಮಾನವೀಯತೆಯ ಮಾರ್ಗವಾಗಿರಲಿ. ಜೆ.ಜೆ.ಎಂ.ಎಂ.ಸಿ.ಯಿಂದ ಹೊರಟ ಪ್ರತಿಯೊಬ್ಬ ವೈದ್ಯರು ರೋಗಿಗಳಿಗೆ ಆಶಾಕಿರಣ, ಸಮಾಜಕ್ಕೆ ಸ್ಫೂರ್ತಿ ಮತ್ತು ರಾಷ್ಟ್ರಕ್ಕೆ ಆರೋಗ್ಯ ಭರವಸೆ ಆಗಲಿ ಎಂದು ಶುಭ ಹಾರೈಸಿದರು.

ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್‌.ಸುದರ್ಶನ ಬಲ್ಲಾಳ್, ಕಾಲೇಜಿನ ಪ್ರಾಚಾರ್ಯರಾದ ಡಾ.ಶುಕ್ಲಾ ಎಸ್‌. ಶೆಟ್ಟಿ, ಬಾಪೂಜಿ ವಿದ್ಯಾ ಸಂಸ್ಥೆಯ ಕಿರುವಾಡಿ ಗಿರಿಜಮ್ಮ, ಡಾ.ಬಕ್ಕಪ್ಪ, ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು. ಘಟಿಕೋತ್ಸವದಲ್ಲಿ 15 ವಿಭಾಗಗಳ 173 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.

- - -

-8ಕೆಡಿವಿಜಿ41:

ದಾವಣಗೆರೆಯಲ್ಲಿಂದು ನಡೆದ ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ