ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ 2-3 ವರ್ಷದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿ, ಚುಚ್ಚುಮದ್ದುಗಳು ಹಾಗೂ ಆಸ್ಪತ್ರೆಗೆ ಸಂಬಂಧಿಸಿದ ಸಾಮಗ್ರಿಗಳ ಖರೀದಿಗೆ ಟೆಂಡರ್ ಕರೆಯದೇ, ಸರ್ಕಾರದ ನಿಯಮ ಉಲ್ಲಂಘಿಸಿ ಔಷಧ, ಇತರ ಉತ್ಪನ್ನಗಳ ಖರೀದಿಸಿದ ಬಗ್ಗೆ ಶೀಘ್ರವೇ ಲೋಕಾಯುಕ್ತದಲ್ಲಿ ದೂರು ದಾಖಲಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣ ಕುಮಾರ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ಎಲ್ಲಾ ಔಷಧಿ, ಇಂಜೆಕ್ಷನ್, ಆಸ್ಪತ್ರೆಗೆ ಸಂಬಂಧಿಸಿದ ಸಾಮಗ್ರಿಗಳ ಸರಬರಾಜು ಬಗ್ಗೆ ಮಾಹಿತಿ ಕೇಳಿದರೆ, ಅಧಿಕಾರಿಗಳು ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಎಂದರು.
ನಂತರ ಮತ್ತೆ 2-3 ವರ್ಷ ಹಳೆಯ ವಿವರದ ಮಾಹಿತಿಯನ್ನು ಆರ್‌ಟಿಐನಡಿ ಕೇಳಿದ್ದೆವು. ತಮಗೆ ದೊರೆತ ಮಾಹಿತಿಯಲ್ಲಿ 2024-25ನೇ ಸಾಲಿನಲ್ಲಿ ವಿವೇಕ್ ಫಾರ್ಮಾದಿಂದ ವಿಎಂಎಸ್ ಬ್ರ್ಯಾಂಡ್‌ನ ವಿಎಂಎಸ್ ಮೆಡಿಕಲ್ ಜಟ್ ಇಂಕ್, 100 ಎಂಎಲ್, 140 ಎಂಎಲ್ ಖರೀದಿಸಿರುವುದು, ಎಕ್ಸ್‌ರೆ 10-8, 1-100 ಡ್ರೈಫಿಲ್ಮ್ ಖರೀದಿಸಿದ್ದಾರೆ. ಆದರೆ, ಸರ್ಕಾರಿ ಆದೇಶದ ಪ್ರಕಾರ ಯಾವುದೇ ಬ್ರ್ಯಾಂಡ್‌ನ ಹೆಸರನ್ನು ನಮೂದಿಸಿಲ್ಲ ಎಂದು ದೂರಿದರು.ಸರ್ಕಾರಿ ಆದೇಶವನ್ನು ಉಲ್ಲಂಘಿಸಿ, ಬ್ರ್ಯಾಂಡ್ ಹೆಸರಿನಲ್ಲಿ ವಿಎಂಎಸ್ ಬ್ರ್ಯಾಂಡ್ ಹೆಸರಿನ ಸಾಮಗ್ರಿ ಖರೀದಿಸಿದ್ದಾರೆ. ಓರ್ವ ಜಿಲ್ಲಾ ಸರ್ಜನ್ ಟೆಂಡರ್ ಕರೆದರೆ ಅದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪಡೆದಿರಬೇಕು. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಡಿಸಿ, ಡಿಎಚ್‌ಓ ಅನುಮತಿ ಪಡೆದಿದ್ದಾರೋ, ಇಲ್ಲವೋ ಎಂಬ ಬಗ್ಗೆ ಉಭಯ ಅಧಿಕಾರಿಗಳನ್ನು ಭೇಟಿ ಮಾಡಿ, ಮಾಹಿತಿ ಕೇಳಲಿದ್ದೇವೆ. ಈ ಇಬ್ಬರೂ ಅಧಿಕಾರಿಗಳ ಅನುಮತಿ ಇಲ್ಲದೇ ಟೆಂಡರ್ ಕರೆಯಲು ಬರುವುದೇ ಇಲ್ಲ ಎಂದು ತಿಳಿಸಿದರು.
ನಾವು ಮಾಹಿತಿ ಕೇಳಿದ ತಕ್ಷಣ ಟೆಂಡರ್ ಅವದಿ ಇನ್ನೂ 3 ತಿಂಗಳು ಬಾಕಿ ಇದ್ದರೂ ಮತ್ತೆ ಹೊಸ ಟೆಂಡರ್ ಕರೆದಿರುವುದು ಸಾಕಷ್ಟು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಜಿಲ್ಲಾ ಸರ್ಜನ್‌ಗೆ ತಾವು ಮಾಡಿದ ತಪ್ಪಿನ ಅರಿವಾಗಿದೆಯೆಂಬುದಾಗಿ ನಾವು ಅರ್ಥ ಮಾಡಿಕೊಳ್ಳಬೇಕೆ? ಜಿಲ್ಲಾ ಸರ್ಜನ್‌ಗೆ ಮಾಹಿತಿ ಕೇಳಿದರೆ ತುಮಕೂರಿನಲ್ಲೇ ತಾವು ಅಮಾನತುಗೊಂಡಿದ್ದು, ತಮ್ಮ ಹಿಂದೆ ಪ್ರಭಾವಿಗಳಿದ್ದಾರೆ. ಸಹಿ ಮಾಡಿದವರೂ ತಮ್ಮೊಂದಿಗೆ ಹೋಗುತ್ತಾರೆಂಬುದಾಗಿ ಉಡಾಫೆಯಾಗಿ ಮಾತನಾಡಿರುವುದು ಸಹ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಎಂದು ಹೇಳಿದರು.ಜಿಲ್ಲಾಸ್ಪತ್ರೆಯಲ್ಲಿ ವಿವೇಕ್ ಫಾರ್ಮದಿಂದ ವಿಎಂಎಸ್ ಬ್ರ್ಯಾಂಡ್‌ನ ವಿಎಂಎಸ್ ಮೆಡಿಕಲ್ ಜಟ್ ಇಂಕ್ ಸೇರಿದಂತೆ ವಿವಿಧ ಉತ್ಪನ್ನಗಳ ಖರೀದಿ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಶೀಘ್ರವೇ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಅರ್ಪಿಸುತ್ತೇವೆ. ಅಷ್ಟೇ ಅಲ್ಲ, ದಾವಣಗೆರೆ ಜಿಲ್ಲಾಸ್ಪತ್ರೆಯ ಟೆಂಡರ್, ಔಷಥಿ, ಚುಚ್ಚುಮದ್ದು ಇತರೆ ಉತ್ಪನ್ನ ಖರೀದಿ ಬಗ್ಗೆಯೂ ಲೋಕಾಯುಕ್ತದಲ್ಲಿ ದೂರು ದಾಖಲಿಸಲಿದ್ದೇವೆ ಎಂದು ತಿಳಿಸಿದರು.
ಮಹಾಸಭಾದ ಅನಿಲ್ ಸುರ್ವೆ, ಎಸ್.ಅರುಣಕುಮಾರ, ಕೆ.ಟಿ.ಹರೀಶಷ ಕೆ.ಜಿ.ಚಂದ್ರು, ಅನಿಲ್, ಜಗನ್, ಗುರುಮೂರ್ತಿ ಇತರರು ಇದ್ದರು.