ಎಂಡಿಎ ನಿವೇಶನ ಹಂಚಿಕೆ ಅಕ್ರಮ ತನಿಖೆಗೆ ರಾಜ್ಯಪಾಲರನ್ನು ಭೇಟಿಯಾಗಲು ಮೈಗ್ರಾಪ ನಿರ್ಧಾರ

KannadaprabhaNewsNetwork | Published : Jul 5, 2024 12:49 AM

ಸಾರಾಂಶ

ತ.ಮ. ವಿಜಯ ಭಾಸ್ಕರ್‌ವರದಿಯ ಕಾಲದಿಂದಲೂ ನಡೆದಿರುವ ಅಕ್ರಮ ಬಯಲಿಗೆ ಬರಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನಡೆದಿರುವ ನಿವೇಶನ ಹಂಚಿಕೆ ಅಕ್ರಮ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮೈಸೂರು ಗ್ರಾಹಕ ಪರಿಷತ್‌ ನಿರ್ಧರಿಸಿದೆ.

ನಗರದ ಯಾದವಗಿರಿಯಲ್ಲಿರುವ ಪರಿಷತ್‌ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಂಸ್ಥಾಪಕ ಸಂಚಾಲಕ ಭಾಮಿ ವಿ. ಶೆಣೈ ಮಾತನಾಡಿ, ತ.ಮ. ವಿಜಯ ಭಾಸ್ಕರ್‌ವರದಿಯ ಕಾಲದಿಂದಲೂ ನಡೆದಿರುವ ಅಕ್ರಮ ಬಯಲಿಗೆ ಬರಬೇಕಿದೆ. ಇದಕ್ಕಾಗಿ ರಾಜ್ಯಪಾಲರ ಬಳಿಗೆ ನಿಯೋಗ ತೆರಳಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತನಿಖೆ ನಡೆಸಲು ಮನವಿ ಸಲ್ಲಿಸೋಣ ಎಂದರು.

ಎಂಡಿಎನಲ್ಲಿ ಹಿಂದಿನಿಂದ ಆದ ಭ್ರಷ್ಟಾಚಾರ ಹೊರಗೆಳೆಯಬೇಕು. ವಿಜಯ ಭಾಸ್ಕರ್ ಸಮಯದ ವರದಿ ತೆಗೆದರೆ ಇದಕ್ಕಿಂತ‌ ಹೆಚ್ಚು ಅಕ್ರಮ ಬಯಲಿಗೆ ಬರುತ್ತದೆ. ರಾಜಕೀಯ ಪಕ್ಷದೊಂದಿಗೆ ಸೇರದೆ ಪರಿಷತ್‌ ಮೂಲಕವೇ ಹೋರಾಟ ಮುಂದುವರೆಸೋಣ. ಸಮಸ್ಯೆಗೆ ತಾರ್ಕಿಕ ಅಂತ್ಯ ದೊರಕಿಸಬೇಕಿದೆ ಎಂದು ಅವರು ಹೇಳಿದರು.

ವಕೀಲ ಎಸ್‌. ಅರುಣ್‌ಕುಮಾರ್ ಮಾತನಾಡಿ, ಎಂಡಿಎಗೆ ಆರಂಭದಲ್ಲಿ ಜಮೀನು ನೀಡಿದವರಿಗೆ 60:40ರ ಅನುಪಾತದಲ್ಲಿ ಸೈಟ್‌ ಹಂಚಿಕೆಯಾಗುತ್ತಿತ್ತು. ಆದರೆ, ಈಗ 50:50 ಅನುಪಾತದಲ್ಲಿ ಹಂಚಿಕೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದಿರಿಸಿ ಇತರೆ ಭೂಗಳ್ಳರು ಆಟ ಆಡುತ್ತಿದ್ದಾರೆ. ಲ್ಯಾಂಡ್‌ಮಾಫಿಯಾ ಎಂಡಿಎಯನ್ನು ಆಕ್ರಮಿಸಿದೆ ಎಂದು ಆರೋಪಿಸಿದರು.

ದೇವನೂರು ಬಡಾವಣೆಗಾಗಿ 1998 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲಿರುವ ಭೂಮಿಯನ್ನು ಎಂಡಿಎ ಪಡೆದುಕೊಂಡಿತ್ತು. ಆದರೆ, ಸೈಟ್‌ ವಿತರಿಸುವಾಗ 50:50 ಅನುಪಾತದಲ್ಲಿ 14 ಸೈಟ್‌ ಗಳನ್ನು ನೀಡಿದ್ದು ಕಾನೂನು ಬಾಹಿರ. ಆ ಸೈಟ್‌ ಗಳನ್ನು ಎಂಡಿಗೆ ವಾಪಾಸ್‌ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡೋಣ ಎಂದರು.

ಮೈಗ್ರಾಪ ಸದಸ್ಯರಾದ ನಟರಾಜ್‌, ರವಿಶಂಕರ್‌, ವಿ.ಎಸ್‌. ಸೀತಾರಾಮ್‌, ಎಸ್. ಶೋಭಾ, ಓಂಕಾರಯ್ಯ, ಎಸ್‌.ಕೆ. ದಿನೇಶ್‌, ವಿಶ್ವನಾಥ್‌, ಭಾನುಪ್ರಕಾಶ್‌ ಮೊದಲಾದವರು ಇದ್ದರು.

-----------------

eom/mys/shekar/

Share this article