ಧರ್ಮಾ ಜಲಾಶಯದ ನೀರು ಹರಿಸಲು ಸಭೆ ಒಪ್ಪಿಗೆ

KannadaprabhaNewsNetwork |  
Published : Sep 24, 2026, 02:00 AM IST
ಹಾನಗಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಧರ್ಮಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ರೈತ ಮುಖಂಡ ಎನ್.ಬಿ. ಪೂಜಾರ ಮಾತನಾಡಿದರು. | Kannada Prabha

ಸಾರಾಂಶ

ಹಾನಗಲ್ಲದಲ್ಲಿ ಧರ್ಮಾ ಜಲಾಶಯ ನಿರ್ವಹಣಾ ಸಮಿತಿ ಸಭೆ

ಹಾನಗಲ್ಲ: ತಾಲೂಕಿನ ಕೃಷಿ ಜೀವನಾಡಿ ಧರ್ಮಾ ಜಲಾಶಯದಿಂದ ಶೀಘ್ರ ನೀರು ಹರಿಸುವ ಮೂಲಕ ರೈತರ ಬೆಳೆಗಳನ್ನು ಉಳಿಸಲು ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಚರ್ಚೆಯಾಗಿ ಸುಖಾಂತ್ಯವಾಯಿತಾದರೂ, ಈ ಬಾರಿ ಬೇಸಿಗೆಗೆ ಧರ್ಮಾ ಜಲಾಶಯದ ನೀರನ್ನು ಅವಲಂಬಿಸಿ ಯಾವ ರೈತರೂ ಬೆಳೆಗಳನ್ನು ಬೆಳೆಯಲು ಅವಕಾಶವಿಲ್ಲ.

ಬುಧವಾರ ಇಲ್ಲಿನ ತಹಸೀಲ್ದಾರ್ ಸಭಾಂಗಣದಲ್ಲಿ ಧರ್ಮಾ ಜಲಾಶಯದ ನಿರ್ವಹಣಾ ಸಮಿತಿ ಅಧ್ಯಕ್ಷ, ಸವಣೂರು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು, ರೈತ ಮುಖಂಡರು ಮಾತನಾಡಿ, ಈಗಿನ ಬೆಳೆಯನ್ನು ಉಳಿಸಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಅದಕ್ಕಾಗಿ ಧರ್ಮಾ ಜಲಾಶಯದ ನೀರನ್ನು ೯೫ ಕಿಮೀ ಉದ್ದದ ಕಾಲುವೆಗೆ ಹರಿಸಿ, ಕೊನೆಯ ಭಾಗದ ಗ್ರಾಮಗಳಿಗೂ ನೀರು ತಲುಪುವಂತಾಗಬೇಕು. ಸೋರಿಕೆಗಳನ್ನು ತಡೆಹಿಡಿಯಬೇಕು. ಭತ್ತದ ಫಸಲು ಬರುವವರೆಗೆ ನೀರು ಹರಿಸಬೇಕು. ಬೇಸಿಗೆಗಾಗಿ ಜನ-ಜಾನುವಾರುಗಳಿಗೆ ಅನುಕೂಲವಾಗಲು ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ರೈತರು ಹೇಳಿದರು.

ಕಾನೂನು ಕ್ರಮ ಕೈಗೊಳ್ಳಿ: ಇದಲ್ಲದೇ ಕೆರೆಗಳಿಗೆ ಮೀನು ಸಾಕಣೆ ಹೆಸರಿನಲ್ಲಿ ಮೈಲುತುತ್ತೆ ಹಾಗೂ ರಾಸಾಯನಿಕಗಳನ್ನು ಬೆರೆಸಿ ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ಇದರಿಂದ ಜನ-ಜಾನುವಾರುಗಳಿಗೆ ರೋಗ ಬರುತ್ತಿದೆ. ಕೆರೆ ಕಾಲುವೆಗಳ ವಾಲ್ವ್‌ಗಳನ್ನು ಕಳ್ಳತನ ಮಾಡಿದರೂ ಅಧಿಕಾರಿಗಳು ಪೊಲೀಸ್ ಪ್ರಕರಣ ದಾಖಲಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುತ್ತಿಲ್ಲ. ಅನಧಿಕೃತವಾಗಿ ಧರ್ಮಾ ಕಾಲುವೆಯಿಂದ ಪಂಪ್‌ಗಳ ಮೂಲಕ ನೀರೆತ್ತುವುದನ್ನು ಸ್ಥಗಿತಗೊಳಿಸಬೇಕು. ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ತಡೆಗೋಡೆ ಎತ್ತರಿಸಬೇಕು. ಕ್ಯಾಸನೂರಿನಲ್ಲಿ ಏತ ನೀರಾವರಿ ಪೈಪ್‌ಗಳನ್ನು ಒಡೆದು ರೈತರು ನೀರು ಹಾಯಿಸಿಕೊಳ್ಳುತ್ತಾರೆ. ಬಸಾಪುರದಲ್ಲಿಯೂ ಪೈಪ್ ಒಡೆಯಲಾಗಿದೆ. ಪೈಪ್‌ಲೈನ್ ವಾಲ್ವ್‌ ಒಡೆದು ನೀರು ಹಾಯಿಸುತ್ತಾರೆ. ಇದೆಲ್ಲವೂ ಕಂಡೂ ಕಾಣದಂತೆ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ರೈತರು ಹರಿಹಾಯ್ದರು.

ಮಲತಾಯಿ ಮಕ್ಕಳು:ಧರ್ಮಾ ಜಲಾಶಯದ ಮುಳುಗಡೆ ಪ್ರದೇಶದಿಂದ ವಲಸೆ ಬಂದ ಶಿವಪುರ ಗ್ರಾಮದ ಜನ ಸರ್ಕಾರದ ಮಲತಾಯಿ ಧೋರಣೆಗೆ ಸಿಕ್ಕು ನರಳುತ್ತಿದ್ದಾರೆ. ಡ್ಯಾಮಿಗೆ ಭೂಮಿ ಕಳೆದುಕೊಂಡು ಇಲ್ಲಿಗೆ ಬಂದು ನೆಲೆಸಿದ್ದೇವೆ. ಆದರೆ ಡ್ಯಾಮಿನ ನೀರು ನಮಗೇ ಸಿಗುತ್ತಿಲ್ಲ ಎಂದು ಈ ಗ್ರಾಮದ ಸಿದ್ದಲಿಂಗೇಶ ದುಂಏರ ಹಾಗೂ ವೀರಭದ್ರಪ್ಪ ತಮ್ಮ ಅಳಲು ತೋಡಿಕೊಂಡರು.

ಅಕ್ಕಿಆಲೂರು ಈಶ್ವರಕೆರೆ ತುಂಬಿಸಬೇಕು. ಅಚ್ಚುಕಟ್ಟು ಪ್ರದೇಶದಲ್ಲಿರದ ಕೆಲವು ರೈತರು ನೀರಾವರಿ ಇಲಾಖೆಯ ಕಾರ್ಮಿಕರಿಗೆ ಹಣ ನೀಡಿ ಕಾಲುವೆ ನೀರನ್ನು ಪಂಪ್‌ಸೆಟ್ ಮೂಲಕ ಹಾಯಿಸಿಕೊಳ್ಳುತ್ತಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಸಿಗುವುದಿಲ್ಲ. ಕೆಲವು ನೌಕರರು ತಾವೂ ಕೆಲಸ ಮಾಡದೇ ಬೇರೆಯವರಿಗೆ ಸಂಬಳ ಕೊಟ್ಟು ಕೆಲಸ ಮಾಡಿಸುತ್ತಿದ್ದಾರೆ ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾದವು.

ತೀರ್ಮಾನ: ಚರ್ಚೆಯ ಆನಂತರ ಸವಣೂರು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ್ ಮಾತನಾಡಿ, ಧರ್ಮಾ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇನೆ. ಅಲ್ಲಿ ೨೯ ಅಡಿ ನೀರಿದೆ. ಧರ್ಮಾ ಕಾಲುವೆಗೆ ನೀರು ಹರಿಸುವ ದಿನಾಂಕ ಹಾಗೂ ಪ್ರಮಾಣ ನಿರ್ಧರಿಸುತ್ತೇವೆ. ಜನ-ಜಾನುವಾರುಗಳಿಗೆ ನೀರು ಉಳಿಸಿಕೊಂಡು ಸದ್ಯ ಅಗತ್ಯವಿರುವ ಬೆಳೆಗಳಿಗೆ ಬೇಕಾಗುವಷ್ಟು ನೀರನ್ನು ಬಿಡುಗಡೆಗೊಳಿಸುತ್ತೇವೆ. ರೈತರ ಕೃಷಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ವಿಠ್ಠಲ ಚೌಗಲಾ, ಬೃಹತ್ ನೀರಾವರಿ ಇಲಾಖೆ ಅಧಿಕಾರಿ ಎನ್. ಗಿರೀಶ್, ಎಲ್.ಜಿ. ರಾಕೇಶ್, ತಾಲೂಕು ಗ್ಯಾಂಟಿ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ, ರೈತ ಮುಖಂಡರಾದ ಮರಿಗೌಡ ಪಾಟೀಲ, ಶ್ರೀನಿವಾಸ ಶಿವಪೂಜಿ, ಎನ್.ಬಿ. ಪೂಜಾರ, ಭರಮಣ್ಣ ಶಿವೂರ, ಕೆ.ಟಿ. ಕಲಗೌಡ್ರ, ರಾಜಣ್ಣ ಗೌಳಿ, ಬಿ.ಸಿ. ಪಾಟೀಲ, ವೀರಪ್ಪ ಬೈಲವಾಳ, ಆನಂದ ಹವಳಣ್ಣನವರ, ಕೊಟ್ರೇಶ್ ಅಂಗಡಿ, ಟಾಕನಗೌಡ ಪಾಟೀಲ, ಅಣ್ಣಪ್ಪ ಚಾಕಾಪುರ, ಆರ್.ಬಿ. ಪಾಟೀಲ, ರುದ್ರಪ್ಪ ಹಣ್ಣಿ ಇತರರು ಅಭಿಪ್ರಾಯಗಳನ್ನು ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ