ಎಥೆನಾಲ್ ಘಟಕ ಸ್ಥಾಪನೆಗಾಗಿ ಕಾರ್ಖಾನೆಯಿಂದ ಸಭೆ

KannadaprabhaNewsNetwork |  
Published : Feb 29, 2024, 02:04 AM IST
28ಕೆಎಂಎನ್ ಡಿ21 | Kannada Prabha

ಸಾರಾಂಶ

ಕಾರ್ಖಾನೆಯಿಂದ ಪರಿಸರ ವಿರೋಧಿ ಕೆಲಸ ಆಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎಥೆನಾಲ್ ಘಟಕ ಸ್ಥಾಪಿಸಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಥೆನಾಲ್ ಘಟಕ ಸ್ಥಾಪನೆಯ ವಿಚಾರವಾಗಿ ತಾಲೂಕು ರೈತಸಂಘದ ವಿರೋಧದ ನಡುವೆಯೂ ಕೋರಮಂಡಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿವಿಧ ಗ್ರಾಮಗಳಲ್ಲಿ ರೈತರ ಸಭೆಗಳನ್ನು ನಡೆಸಿ ಘಟಕ ಆರಂಭದಿಂದ ಆಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದೆ.

ತಾಲೂಕಿನ ಕುಪ್ಪಹಳ್ಳಿ, ಹೊನ್ನೇನಹಳ್ಳಿ ಸೇರಿ ಗ್ರಾಮಗಳಲ್ಲಿ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಮತ್ತು ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಜಾಗೃತಿ ಸಭೆ ನಡೆಸುತ್ತಿದೆ.

ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್ ಮಾತನಾಡಿ, ಕಾರ್ಖಾನೆಯಿಂದ ಪರಿಸರ ವಿರೋಧಿ ಕೆಲಸ ಆಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎಥೆನಾಲ್ ಘಟಕ ಸ್ಥಾಪಿಸಲು ಮುಂದಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಎಥೆನಾಲ್ ಜೈವಿಕ ಇಂಧನವನ್ನು ಕಾರ್ಖಾನೆಯು ಉತ್ಪಾದಿಸುತ್ತದೆ, ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಎಥೆನಾಲ್ ಅನ್ನು ಬಳಸಿಕೊಳ್ಳಲು ಅವಕಾಶವಿದೆ. ಕಬ್ಬು ಬೆಳೆಗಾರರ ಹಿತವನ್ನುಗುರಿಯನ್ನಾಗಿಸಿಕೊಂಡು ಕಾರ್ಖಾನೆ ಕೆಲಸ ಮಾಡುತ್ತಿದೆ. ಆದರೆ, ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದೆಂದು ಮನವಿ ಮಾಡಿದರು.

ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬೋರಾಪುರ ಮಂಜುನಾಥ್ ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಕಾರ್ಖಾನೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎಥೆನಾಲ್ ಘಟಕ ನಿರ್ಮಿಸಿ ಕಬ್ಬು ಅರೆಯುವುದರಿಂದ ಬರುವ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿದೆ. ಸಂಸ್ಕರಣೆ ಮಾಡಿದ ನೀರನ್ನು ಎಥೆನಾಲ್ ಘಟಕ ನಿರ್ವಹಣೆಗೆ ಬಳಸುವುದರಿಂದ ಒಂದೇ ಒಂದು ಹನಿ ನೀರು ಕೂಡ ಹೊರಬರದಂತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ಈ ಬಗ್ಗೆ ಕಬ್ಬು ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಮಾ.6ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎಥೆನಾಲ್ ಘಟಕ ಆರಂಭ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ತಾಲೂಕಿನ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಾರ್ಖಾನೆ ಕಬ್ಬು ವಿಭಾಗದ ಸಹಾಯಕ ಅಧಿಕಾರಿ ದತ್ತಾತ್ರೇಯ, ಮಾಕವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮೇಗೌಡ, ಉಪಾಧ್ಯಕ್ಷ ಮಂಜುನಾಥ್, ಸಿಂಧಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಬಂಡಿಹೊಳೆ ಗ್ರಾಪಂ ಮಾಜಿ ಅಧ್ಯಕ್ಷ ಕಾಯಿ ಮಂಜೇಗೌಡ, ದರ್ಶನ್, ಜಯರಾಮೇಗೌಡ, ಸಾಕ್ಷೀಬೀಡು ಕೃಷ್ಣೇಗೌಡ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ವಡಕಹಳ್ಳಿ ಮಂಜೇಗೌಡ, ದೇವರಾಜೇಗೌಡ, ಸುರೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ