ಕನ್ನಡಪ್ರಭ ವಾರ್ತೆ ಮೈಸೂರುಕೈಗಾರಿಕೆಗಳಿಂದ ಪಡೆದ ತೆರಿಗೆ ಹಣವನ್ನು ಅಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಬಳಸುವಂತೆ ಎಸ್.ಐ.ಆರ್ ರೂಪಿಸುತ್ತಿದ್ದು, ಆ ಮೂಲಕವೇ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರಿನ ವಿವಿಧ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ರಾಜ್ಯ ದೇಶದಲ್ಲಿ ಮಾದರಿ ಕೈಗಾರಿಕಾ ರಾಜ್ಯವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ ನಂತರ ಕೈಗಾರಿಕಾ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ ಹಿಂದೆ ಕೈಗಾರಿಕೆಗಳಿಂದ ತೆರಿಗೆ ಪಡೆದ ಗ್ರಾಪಂ ಗಳು ಹಾಗೂ ನಗರ ಸಭೆಗಳು ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದರು. ಇನ್ನೂ ಮುಂದೆ ಕೈಗಾರಿಕೆಗಳಿಂದ ಪಡೆದ ಹಣವನ್ನು ಅಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಬಳಸುವಂತೆ ಎಸ್.ಐ.ಆರ್ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಕೈಗಾರಿಕೆ ಪ್ರದೇಶಗಳ ರಸ್ತೆ, ಚರಂಡಿ, ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಪರಿಹಾರ ವಿತರಣೆಯಲ್ಲಿ ಆಗಿರುವ ಲೋಪ ಕುರಿತು ತನಿಖೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ರಾಜ್ಯದಲ್ಲಿ ನಮ್ಮಿಂದ ಕೈಗಾರಿಕಾ ಭೂಮಿ ನೀಡುವಲ್ಲಿ ವಿಳಂಬ ಆಗಿರುವ ಕೈಗಾರಿಕೆಗಳಿಗೆ ಇಂಪಿಮೆಂಟೇಷನ್ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಜಿಲ್ಲಾ ಕೈಗಾರಿಕಾ ಸಂಘಗಳ ಅಧ್ಯಕ್ಷ ಲಿಂಗರಾಜು ಮಾತನಾಡಿ, ಕೆಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳು ಗುಂಡಿಗಳು ಬಿದ್ದಿವೆ. ರಸ್ತೆಗಳ ಅಭಿವೃದ್ಧಿ ಆಗಬೇಕು. ಹೂಟಗಳ್ಳಿ ನಗರಸಭೆಗೆ ತೆರಿಗೆ ಕಟ್ಟಿದ್ದೇವೆ. ರಸ್ತೆ ಅಭಿವೃದ್ಧಿಗೆ ನಗರ ಸಭೆ ಅವರು ಟೆಂಡರ್ ಕರೆದಿದ್ದಾರೆ. ಆದರೆ ಅದು ಬಾಕಿ ಇದೆ. 2013 ರಿಂದ ಹಣ ಕಟ್ಟಿದ್ದರೂ ನಿವೇಶನ ನೀಡಿಲ್ಲ. ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ಬಸ್ ಗಳ ವ್ಯವಸ್ಥೆ ಸರಿಯಾಗಿ ಇಲ್ಲ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿ ಪ್ಲೇ ಓವರ್ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು.ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಮಾತನಾಡಿ, ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದಿದ್ದರೂ ರೈತರ ಅಸಹಕಾರದಿಂದ ಕೈಗಾರಿಕಾ ಸ್ಥಾಪನೆ ಕೆಲವು ಕಡೆಆಗಿಲ್ಲ. ಆದ್ದರಿಂದ ಕೈಗಾರಿಕಾ ಸ್ಥಾಪನೆ ಅವಧಿಯನ್ನು ಇನ್ನೂ 3 ವರ್ಷ ವಿಸ್ತರಿಸಬೇಕು. ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡಿದ ರೈತರಿಗೆ ಪರಹಾರ ಹಣ ಇನ್ನೂ 50 ರೈತರಿಗೆ ನೀಡಿಲ್ಲ. ಹಡಗನಹಳ್ಳಿ ಪದೇಶದಲ್ಲಿ 76 ಎಕರೆ ಪ್ರದೇಶ ಕೆಐಡಿಬಿಗೆ ಹ್ಯಾಂಡ್ ಓವರ್ ಆಗಿಲ್ಲ. ಇದು ಆದರೆ ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.ರೈತ ಸಂಘದ ಪದಾಧಿಕಾರಿಗಳು ಮಾತನಾಡಿ, ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ರೈತರಿಂದ ಭೂಮಿಯನ್ನು ಕೈಗಾರಿಕೆಗೆ ವಶ ಪಡಿಸಿಕೊಂಡಿರುತ್ತಾರೆ. ಭೂಮಿ ಕಳೆದುಕೊಂಡ ರೈತರಿಗೆ ಪರಹಾರ 18 ಕೋಟಿ ರೂ. ಬಿಡುಗಡೆ ಆಗಿತ್ತು. ಇದರಲ್ಲಿ 448 ಜನರಿಗೆ ಪರಿಹಾರ ನೀಡಿದ್ದು ಇದರಲ್ಲಿ ಹೆಚ್ಚು ಜನ ಅನರ್ಹರು ಇದ್ದು ನಿಜವಾದ ರೈತರಿಗೆ ಪರಿಹಾರ ದೊರೆತಿಲ್ಲ. ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ನೀಡಿಲ್ಲ ಎಂದು ಅವರು ದೂರಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕೆ ಇಲಾಖೆ ಆಯುಕ್ತ ಗುಂಜನ್ ಕೃಷ್ಣ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.