ಹಾವೇರಿ: ದಶಕ ಕಳೆದರೂ ಹಾವೇರಿ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಅನುಷ್ಠಾನ ಸಾಧ್ಯವಾಗದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು, ಈ ಕುರಿತು ಚರ್ಚಿಸಲು ಸಂಬಂಧಪಟ್ಟ ಸಚಿವರು, ಕೆಯುಐಡಿಎಫ್‌ಸಿ ಅಧಿಕಾರಿಗಳು, ಅಧ್ಯಕ್ಷರ ಸಮ್ಮುಖದಲ್ಲಿ ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದರು.
ಇಲ್ಲಿಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ 31 ವಾರ್ಡ್‌ಗಳಿದ್ದು, ಒಂದು ವಾರ್ಡಿಗೆ ಕೂಡ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಯೋಜನೆ ಶುರುವಾಗಿ 10 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡು ಜನರಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ ಎಂಬುದು ದುರ್ದೈವ.ಇಲ್ಲಿಯ ಜನ ಒಳ್ಳೆಯವರಿದ್ದಾರೆ. ಯಾರೂ ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ. ಗುತ್ತಿಗೆದಾರರು ಶೇ. 90ರಷ್ಟು ಕಾಮಗಾರಿ ಮುಗಿದಿದೆ, ಮನೆ ಮನೆಗೆ ನೀರು ಹೊಗುತ್ತಿದೆ ಎನ್ನುತ್ತಿದ್ದಾರೆ. ಯಾವ ವಾರ್ಡಿಗೆ ನೀರು ಸಮರ್ಪಕವಾಗಿ ಹೋಗುತ್ತದೆ ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು.
ಆಗ ಸದಸ್ಯರು ಎದ್ದು ನಿಂತು, ಯಾವ ವಾರ್ಡಿಗೂ ನೀರು ಸರಿಯಾಗಿ ಹೋಗುತ್ತಿಲ್ಲ. ನಾವೇ ಮೋಟರ್ ಹಚ್ಚಿದರೂ ಕೊಡ ನೀರು ತುಂಬುತ್ತಿಲ್ಲ. ಅಂಥದ್ದರಲ್ಲಿ ಜನಸಾಮಾನ್ಯರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಸಮಾಧಾನ ಹೊರಹಾಕಿದರು.ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ತುಂಗಭದ್ರಾ, ವರದಾ ನದಿ ಹಾಗೂ ಹೆಗ್ಗೇರಿ ಕೆರೆಯಿಂದ ನಗರಕ್ಕೆ ನೀರು ತರಿಸಲಾಗುತ್ತದೆ. ನೀರು ಸರಬರಾಜಿಗೆ 5 ಜೋನ್‌ಗಳನ್ನು ಮಾಡಲಾಗಿದ್ದು, ಒಂದು ಜೋನ್ ಕೂಡ ಯಶಸ್ವಿಯಾಗಿಲ್ಲ. ಮನೆಗಳಿಗೆ ಮೀಟರ್ ಅಳವಡಿಕೆ ಮಾಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಆಗ ಪ್ರತಿಕ್ರಿಯಿಸಿದ ಶಾಸಕ ರುದ್ರಪ್ಪ ಲಮಾಣಿ ಅವರು, ಇವರ ಜತೆಗೆ ಚರ್ಚೆ ಅಗತ್ಯವಿಲ್ಲ. ಮುಂದಿನ ವಾರ ಬೆಂಗಳೂರಿನಲ್ಲಿ ಸಂಬಂಧಿಸಿದ ಸಚಿವರು, ಕೆಯುಐಡಿಎಫ್‌ಸಿ ಅಧಿಕಾರಿಗಳು, ಕಮಿಷನರ್ ಜತೆಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸೋಣ ಎಂದು ಹೇಳಿ ವಿಷಯದ ಚರ್ಚೆಗೆ ತೆರೆ ಎಳೆದರು. ಶೌಚಾಲಯ ನಿರ್ಮಿಸಿ:ಪ್ರತಿನಿತ್ಯ ಜಿಲ್ಲಾ ಕೇಂದ್ರಕ್ಕೆ ವಿವಿಧ ಕೆಲಸ, ಕಾರ್ಯಗಳಿಗಾಗಿ ಹತ್ತಾರು ಸಾವಿರ ಜನರು ಬಂದು ಹೋಗುತ್ತಾರೆ. ಮಹಿಳೆಯರಾದಿಯಾಗಿ ಸಾರ್ವಜನಿಕರು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಬಂದಿರುವ ಹಣ ವಾಪಸ್ ಹೋಗದೆ ಸುಭಾಸ ಸರ್ಕಲ್, ಮುನ್ಸಿಪಲ್ ಹೈಸ್ಕೂಲ್ ಸೇರಿ ಹಲವೆಡೆ ಜಾಗದ ಲಭ್ಯತೆ ನೋಡಿಕೊಂಡು ಸಮುದಾಯ ಶೌಚಾಲಯ ನಿರ್ಮಿಸಬೇಕೆಂದು ಸಂಜೀವಕುಮಾರ ನೀರಲಗಿ ಒತ್ತಾಯಿಸಿದರು. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವಿರೋಧ ಮಾಡುವ ಜಾಗದಲ್ಲಿ ಪೊಲೀಸರ ಭದ್ರತೆಯಲ್ಲಿ ಶೌಚಾಲಯ ನಿರ್ಮಿಸಿ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು. ಟ್ರಾಫಿಕ್ ಸಮಸ್ಯೆ: ಎಲ್‌ಬಿಎಸ್ ಮಾರುಕಟ್ಟೆ ಸೇರಿದಂತೆ ಮುಖ್ಯ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಪರ್ಯಾಯವಾಗಿ ನಗರಸಭೆಯಿಂದಲೇ ಬೀದಿ ವ್ಯಾಪಾರಿಗಳಿಗೆ ಚರಂಡಿ ಮೇಲ್ಭಾಗದಲ್ಲಿ ಕಲ್ಲು ಹಾಕಿಸಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸದಸ್ಯರು ಹೇಳಿದಾಗ, ಸಭೆ ಒಪ್ಪಿಗೆ ಸೂಚಿಸಿತು.
ಅದೇ ರೀತಿ ಎಲ್‌ಬಿಎಸ್ ಮಾರುಕಟ್ಟೆಯಲ್ಲಿ 29 ಮಳಿಗೆಗಳು ಬಾಡಿಗೆ ಹೆಚ್ಚಳವಾಗುತ್ತೆ ಎನ್ನುವ ಕಾರಣಕ್ಕೆ ಟೆಂಡರ್‌ಗೆ ಯಾರು ಬರುತ್ತಿಲ್ಲ ಎಂಬುದು ಗಮನದಲ್ಲಿದೆ. ಈ ಬಗ್ಗೆ ಪೌರಾಡಳಿತ ಸಚಿವರ ಜತೆಗೆ ಚರ್ಚಿಸಲಾಗುವುದು. ಪಕ್ಷಾತೀತವಾಗಿ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿ ಮಳಿಗೆಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಹಂಚಲು ಸಹಕರಿಸಬೇಕೆಂದು ತಿಳಿಸಿದರು.ಸಿಸಿ ಕ್ಯಾಮೆರಾ ಅಳವಡಿಕೆ: ಈ ಹಿಂದೆ ನಗರಸಭೆಯಿಂದ ಅಳವಡಿಸಲಾದ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇರುವುದರಿಂದ ಬೈಕ್ ಕಳ್ಳತನ, ಮನೆ ಕಳ್ಳತನ, ಸರಗಳ್ಳತನ ಬಗ್ಗೆ ಕಳ್ಳರನ್ನು ಪತ್ತೆ ಮಾಡಲು ಆಗುತ್ತಿಲ್ಲ. ಹಳೆ ಬಿಲ್ ಪಾವತಿಸದ ಹಿನ್ನೆಲೆ ಟೆಂಡರ್‌ದಾರರು ರಿಪೇರಿಗೆ ಮುಂದಾಗುತ್ತಿಲ್ಲ. ಹಳೆ ಬಿಲ್ ಕ್ಲಿಯರ್ ಮಾಡಬೇಕು ಎಂದು ಸದಸ್ಯ ಸಂಜೀವಕುಮಾರ ಹಾಗೂ ಶಹರ ಪೊಲೀಸ್ ಠಾಣೆ ಸಿಪಿಐ ಪವಾರ್ ಎಂದರು. ಈ ಬಗ್ಗೆ ಶಾಸಕರು ಸಿಸಿ ಕ್ಯಾಮೆರಾ ಅಳವಡಿಕೆ ಬಿಲ್ ಪಾವತಿಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ಎರಡೂವರೆ ತಿಂಗಳಲ್ಲಿ ನಗರಸಭೆ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿಯಲಿದ್ದು, ಕಿರು ಪ್ರವಾಸ ಕೈಗೊಳ್ಳುವ ಮೂಲಕ ಇಳಕಲ್ಲ ಹಾಗೂ ಪುಣೆಯಲ್ಲಿ ಮಾಡಲಾದ ನಿರಂತರ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆಗೆ ಹಾಗೂ ಪರಿಶೀಲಿಸಲು ಅವಕಾಶ ಕಲ್ಪಿಸಬೇಕೆಂದು ಸದಸ್ಯ ಸಂಜೀವಕುಮಾರ ನೀರಲಗಿ ಸಭಾಧ್ಯಕ್ಷರಿಗೆ ಒತ್ತಾಯಿಸಿದರು.
ಇನ್ನೂ ಸಭೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಸಭೆ ಕರೆಯಲು ಸದಸ್ಯರು ಒತ್ತಾಯ ಮಾಡಿದರು. ನಗರ ಸೌಂದರ್ಯೀಕರಣ, ವೃತ್ತಗಳ ಅಭಿವೃದ್ಧಿ, ಹೈಟೆಕ್ ರಂಗಮಂದಿರ ಹೀಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭಾರ ಪೌರಾಯುಕ್ತ ಸುಭಾಸ ಕಂಬಳಿ ಇದ್ದರು.