ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಸಭೆ

KannadaprabhaNewsNetwork | Updated : Aug 22 2024, 12:49 AM IST

ಸಾರಾಂಶ

ಸುಂಟಿಕೊಪ್ಪ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಯೋಜಿಸಲಾದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವನಿಯೋಜಿತ ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರರಾಜ್‌ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರೀ ಗೌರಿ ಗಣೇಶ ಹಬ್ಬ ಆಚರಣೆಯ ಸಂದರ್ಭ ಆಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸುವುದು, ಹಬ್ಬದ ಸಂಸ್ಕೃತಿ ಎತ್ತಿ ಹಿಡಿಯುವುದು ಮುಖ್ಯ. ಕಾನೂನು ಪರಿಪಾಲಿಸುವುದು ಅಗತ್ಯವಾಗಿದ್ದು, ಯಾವುದೇ ಅನಾಹುತಗಳು ಸಂಭವಿಸಿದರೆ ಆಯೋಜಕರೇ ನೇರ ಹೊಣೆಗಾರರು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರರಾಜ್‌ ಹೇಳಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಯೋಜಿಸಲಾದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವನಿಯೋಜಿತ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮಗಳಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕ ಸಮಿತಿಗಳು ಪೊಲೀಸ್‌ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಕಡ್ಡಾಯವಾಗಿ ಪಡೆದುಕೊಂಡಿರಬೇಕು, ಮುಂಜಾಗ್ರತಾ ಕ್ರಮವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವುದರಿಂದ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಕರಿಯಾಗಲಿದೆ ಎಂದರು.

ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಪದಾಧಿಕಾರಿಗಳು ಕಾವಲು ಇರಿಸುವಂತೆ ಸೂಚಿಸಿದರು. ಸ್ಥಳದ ಪೂರ್ವಾಪರ ಮಾಹಿತಿ ಪಡೆದಿರಬೇಕು, ಮೂರ್ತಿ ವಿಸರ್ಜನೆ ವೇಳೆ ನುರಿತ ಈಜು ಬಲ್ಲವರು ಹಾಜರಿದ್ದು, ಅವರು ಸೂಕ್ತ ಭದ್ರತೆಯ ಜಾಕೆಟ್‌ ಕಡ್ಡಾಯವಾಗಿ ಧರಿಸಿರಬೇಕು, ಮೂರ್ತಿ ವಿಸರ್ಜನೆ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿ, ನಿಗದಿತ ಸಮಯವನ್ನು ಪೊಲೀಸ್‌ ಠಾಣೆಗೆ ತಿಳಿಸುವಂತೆ ಅವರು ಸೂಚಿಸಿದರು.

ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿದರು.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸರ್ಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ.ಭಾರತಿ, ಪೊಲೀಸ್ ಸಿಬ್ಬಂದಿ, ವಿವಿಧ ಗ್ರಾಮಗಳಿಂದ ಆಗಮಿಸಿದ ಆಯೋಜಕರು ಇದ್ದರು.

Share this article