ಮೇಲುಕೋಟೆ: ರಾಮಾನುಜಾಚಾರ್ಯರಿಗೆ ವೈಭವದ ಮಹಾರಥೋತ್ಸವ

KannadaprabhaNewsNetwork |  
Published : May 02, 2025, 12:08 AM IST
1ಕೆಎಂಎನ್ ಡಿ29,30,31 | Kannada Prabha

ಸಾರಾಂಶ

ಮಹಾರಥ ಮಾರಿಗುಡಿಬೀದಿ, ರಾಜಬೀದಿ, ವಾನಮಾಮಲೈ ಮಠದ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 3-ಗಂಟೆ ವೇಳೆಗೆ ಮುಕ್ತಾಯವಾಯಿತು. ಮಹಾರಥೋತ್ಸವದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯ ಶ್ರೀವೈಷ್ಣವ ಭಕ್ತರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವಿಶ್ವಾವಸು ಸಂವತ್ಸರದ 1008ನೇ ಜಯಂತ್ಯುತ್ಸವದ ಮುನ್ನಾ ದಿನವಾದ ಗುರುವಾರ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರಿಗೆ ಮಹಾರಥೋತ್ಸವ ವೈಭವದಿಂದ ನೆರವೇರಿತು.

ಮಹಾ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಆಚಾರ್ಯರಿಗೆ ಬೆಳಗ್ಗೆ 9ಗಂಟೆಗೆ ಯಾತ್ರಾದಾನವಾದ ನಂತರ ವೇದ ಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಒಳಪ್ರಾಕಾರದಲ್ಲಿ ಉತ್ಸವ ನೆರವೇರಿತು.

ನಂತರ ರಾಮಾನುಜರ ಎದರುಸೇವೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಹಾ ಮಂಗಳಾರತಿ ನಡೆದು ರಾಮಾನುಜರಿಗೆ ಮರ್ಯಾದೆ ನಡೆದ ನಂತರ ಉತ್ಸವ ರಥದಮಂಟಪದ ಬಳಿಗೆ ಬಂದುಸೇರಿತು.

ರಥಮಂಟಪಕ್ಕೆ ಮೂರು ಪ್ರದಕ್ಷಿಣೆ ಹಾಗೂ ಜೋಯಿಸರಿಂದ ಮಹೂರ್ತ ಪಠಣೆಯಾದ ನಂತರ 11.30ಕ್ಕೆ ರಥಾರೋಹಣ ಕಾರ್ಯಕ್ರಮ ನೆರವೇರಿತು. ದಿವ್ಯಪ್ರಬಂದ ಪಾರಾಯಣಗೋಷ್ಠಿ ನೆರವೇರಿತು. ಈ ಮೂಲಕ 12.30ಕ್ಕೆ ಮಹಾರಥಕ್ಕೆ ಚಾಲನೆ ನೀಡಿದರು.

ಮಹಾರಥ ಮಾರಿಗುಡಿಬೀದಿ, ರಾಜಬೀದಿ, ವಾನಮಾಮಲೈ ಮಠದ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 3-ಗಂಟೆ ವೇಳೆಗೆ ಮುಕ್ತಾಯವಾಯಿತು. ಮಹಾರಥೋತ್ಸವದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯ ಶ್ರೀವೈಷ್ಣವ ಭಕ್ತರು ಭಾಗವಹಿಸಿದ್ದರು. ಮಹಾ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್, ಆಗಪ್ರವೀಣ ವಿದ್ವಾನ್‌ ಭಾ.ವಂ. ರಾಮಪ್ರಿಯ ನೆರವೇರಿಸಿದರು.

ದೇವಾಲಯದ ಇಒ ಶೀಲಾ, ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ಪಾರ್ಥಸಾರಥಿ ಮಾರ್ಗದರ್ಶನದಲ್ಲಿ ದೇವಾಲಯದ ಶ್ರೀಪಾದದವರು, ಬಂಡೀಕಾರರು ಹಾಗೂ ಯುವಕರು ರಥಸಾಗಲು ಗೊದಮ, ಎದ್ದ ನೀಡಿ ಶ್ರಮಿಸಿದರು.

ರಾಮಾನುಜಚಾರ್ಯರ ಮಹಾರಥ ಎಳೆಯಲು ಸೇರಿದ್ದವರಲ್ಲಿ ಹೆಚ್ಚುಮಂದಿ ಮಹಿಳಾ ಭಕ್ತರೇ ತುಂಬಿದ್ದು ರಾಮಾನುಜ-ಯತಿರಾಜ ಎಂಬ ಜಯಘೋಷದೊಂದಿಗೆ ಆರಂಭಿದಿಂದಲೂ ಮಹಾರಥನೆಲೆಸೇರುವವರೆಗೂ ತೇರೆಳೆಯುವ ಕೈಂಕರ್ಯಮಾಡಿ ಮಹಾರಥೋತ್ಸವವನ್ನು ಯಶಸ್ವಿಗೊಳಿಸಿದರು. ಸಬ್‌ ಇನ್ಸ್‌ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಸಂಜೆ ಯತಿರಾಜಮಠದಲ್ಲಿ ರಾಮಾನುಜರಿಗೆ ಅಂತರಂಗ ಅಭಿಷೇಕ ನೆರವೇರಿತು. ಮೇಲುಕೋಟೆಯಲ್ಲಿದ್ದಾಗ ಸಾಕ್ಷಾತ್ ರಾಮಾನುಜರೇ ಸ್ಥಾನೀಕರಿಂದ ಬಿಕ್ಷೆ ಸ್ವೀಕರಿಸುತ್ತಿದ್ದ ಐತಿಹಾಸಿಕ ವಿಶೇಷದ ಹಿನ್ನಲೆಯಲ್ಲಿ ನಡೆಯುವ ಬಿಕ್ಷಾ ಕೈಂಕರ್ಯ ಸೇವೆಯನ್ನು ರಾತ್ರಿ ರಾಮಾನುಜರ ಸನ್ನಿಧಿಯಲ್ಲಿ ಸ್ಥಾನೀಕರಾದ ಶ್ರೀನಿವಾಸನರಸಿಂಹನ್‌ ಗುರೂಜಿ ಮತ್ತುಸಹೋದರ ಯತಿರಾಜದಾಸರ್ ಗುರುಪೀಠದ ವತಿಯಿಂದ ನೆರವೇರಿಸಿದರು. ಮುನ್ನಾದಿನವಾದ ಬುಧವಾರರಾತ್ರಿ ಸ್ಥಾನೀಕಂ ಮುಕುಂದನ್ ಮಂಗಳವಾರ ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ ಬಿಕ್ಷಾಕೈಂಕರ್ಯ ಸೇವೆ ಸಲ್ಲಿಸಿದ್ದರು. ಇಂದು ಮಹಾಭಿಷೇಕ, ಬೆಳ್ಳಿ ಪಲ್ಲಕ್ಕಿ, ದಶಾವತಾರ ಉತ್ಸವ:

ರಾಮಾನುಜಾಚಾರ್ಯರಿಗೆ ಮೇ 2ರ ಶುಕ್ರವಾರ ಬೆಳಗ್ಗೆ 9ಕ್ಕೆ ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ, ಸಂಜೆ ಗಂಧದ ಅಲಂಕಾರದಲ್ಲಿ ಬೆಳ್ಳಿಪಲ್ಲಕ್ಕಿಉತ್ಸವ, ರಾತ್ರಿ 11ಗಂಟೆಗೆ ಶ್ರೀಚೆಲುವನಾರಾಯಣಸ್ವಾಮಿಯವರ ದಶಾವತಾರ ಉತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?