ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಸ್ಥಾನಾಚಾರ್ಯರನ್ನು ನಾರಾಯಣಸ್ವಾಮಿ ಜಯಂತಿ ಮತ್ತು ತೀರ್ಥಸ್ನಾನದ ಶುಭ ದಿನವಾದ ಶನಿವಾರ ರಾತ್ರಿ ಪಾರಂಪರಿಕ ಪದ್ಧತಿಯಂತೆ ಮಾಲೆ ಮರ್ಯಾದೆ ಮಾಡಿ ಗೌರವಿಸಲಾಯಿತು.ವೈರಮುಡಿ ಬ್ರಹ್ಮೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣ ಪಾರಂಪರಿಕವಾಗಿ ಸಲ್ಲುವ ಶ್ರೀಚೆಲುವನಾರಾಯಣನ ಪ್ರಸಾದ ರೂಪವಾದ ಮಾಲೆಮರ್ಯಾಧೆಯನ್ನು ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ತಿರುವನಂತಪುರ ದಾಸರ್ ಕರಗಂ ರಾಮಪ್ರಿಯ, ತಿರುಕ್ಕುರುಂಗುಡಿದಾಸರ್ ಕೋವಿಲ್‌ನಂಬಿ ಮುಕುಂದನ್ ಸ್ವೀಕರಿಸಿದರು. ಚೆಲುವನಾರಾಯಣಸ್ವಾಮಿಯ ಆಭರಣಗಳ ಜವಾಬ್ದಾರಿ, ಸಂರಕ್ಷಣೆ, ಉತ್ಸವಗಳ ಮೇಲೆ ನಿಗಾ, ತೋಮಾಲೆ ಹಾಗೂ ವಸ್ತ್ರ ಆಯ್ಕೆ, ಉತ್ಸವಗಳ ನಿರ್ವಹಣೆಯ ಪ್ರಮುಖ ಸಹಕಾರ ಮಹಾರಾಜರು ಮತ್ತು ಮಂತ್ರಿಗಳಿಗೆ ಶ್ರೀಮುಖ ಮತ್ತು ಮರ್ಯಾದೆ, ಪ್ರಸಾದ ತಲುಪಿಸುವುದು ಹೀಗೆ ಹತ್ತು ಹಲವು ಜವಾಬ್ದಾರಿಗಳ ಜೊತೆ ತಮ್ಮದೇ ಪಾಲಿನ ಕರ್ತವ್ಯವನ್ನೂ ಸ್ಥಾನೀಕರು ಅನೂಚಾನವಾಗಿ ನಿರ್ವಹಿಸುತ್ತಾ ಬಂದಿದ್ದಾರೆ.
ಶ್ರೀರಾಮಾನುಜಾಚಾರ್ಯರು ಮೇಲುಕೋಟೆ ದೇವಾಲಯ ಜೀರ್ಣೋದ್ಧಾರ ಮಾಡಿದ ವೇಳೆ ಪುಣ್ಯಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಐಂಬತ್ತಿರುವರ್ ಅಂದರೆ 25 ಮಂದಿ ಪ್ರಿಯ ಶಿಷ್ಯರನ್ನು ಕರೆದುಕೊಂಡು ಬಂದು ಇಲ್ಲಿ ನೆಲೆ ನಿಲ್ಲುವಂತೆ ಮಾಡಿದರು. ಐಂಬತ್ತಿರುವರ್‌ಗಳಲ್ಲಿಯೂ ಯಾಜಮಾನಿಕೆ ಹಾಗೂ ನಾಲ್ಕು ಜನ ನಿಷ್ಟಾವಂತ ಪ್ರಿಯ ಶಿಷ್ಯರಾದ ಸ್ಥಾನಾಚಾರ್ಯರನ್ನು ನೇಮಿಸಿದರು.ಈ ಸ್ಥಾನಾಚಾರ್ಯರೇ ಹೊಯ್ಸಳರ ಕಾಲದಿಂದ ಮೇಲುಕೋಟೆಯ ಆಡಳಿತ ಮತ್ತು ದೇವಾಲಯದ ಧಾರ್ಮಿಕ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಇವರ ಒಪ್ಪಿಗೆ ಇಲ್ಲದೆ ಯಾವ ಕಾರ್ಯವೂ ನಡೆಯುತ್ತಿರಲಿಲ್ಲ. ನಾಲ್ಕು ಬಾರಿ ನಾರಾಯಣ ಶಬ್ದದ ಜೊತೆಗೆ ಇವರು ಸಹಿ ಮಾಡುತ್ತಿದ್ದರು.
ಇದನ್ನು ಹೊಯ್ಸಳರ ಕಾಲದಿಂದ ಹಿಡಿದು ಮೈಸೂರು ಅರಸರ ಕಾಲದವರೆಗಿನ ದೇವಾಲಯದ ಬಹುತೇಕ ಶಾಸನಗಳು ಉಲ್ಲೇಖಿಸುತ್ತವೆ. ಸ್ಥಾನಾಚಾರ್ಯರ ಕಾರ್ಯಗಳ ಬಗ್ಗೆ ಶ್ರೀರಾಮಾನುಜಾಚಾರ್ಯರೇ ಬರೆದ ಉಡೈಯವರ್ ನಿಯಮನಪ್ಪಡಿ ಯಲ್ಲಿ ದಾಖಲಿಸಲಾಗಿದೆ.ಮೈಸೂರು ಅರಸರ ಕಾಲದಲ್ಲಿ ಆಡಳಿತವನ್ನು ಅರಸರಿಗೆ ಬಿಟ್ಟುಕೊಟ್ಟು ಧಾರ್ಮಿಕ ಕೈಂಕರ್ಯಗಳನ್ನು ಮಾತ್ರ ನಿರ್ವಹಿಸುವುದನ್ನು ಉಳಿಸಿಕೊಂಡರೆಂದು ವಂಶರತ್ನಾಕರ ಮೈಸೂರು ಶ್ರೀಮನ್ಮಹಾರಾಜವಂಶಾವಳಿಯಲ್ಲಿ ಉಲ್ಲೇಖಿತವಾಗಿದೆ. ಭಕ್ತಶ್ರೇಷ್ಠ ಕನಕದಾಸರೂ ಸಹ ತಮ್ಮ ಮೋಹನತ ರಂಗಿಣಿಯಲ್ಲಿ ಸ್ಥಾನೀಕರ ಬಗ್ಗೆ ಉಲ್ಲೇಖಿಸಿ ಕೀರ್ತನೆ ರಚಿಸಿರುವುದು ವಿಶೇಷವಾಗಿದೆ.
ಸ್ಥಾನಾಚಾರ್ಯರು ಸಾಮಾನ್ಯ ಶಕೆ 1080 ರಿಂದ ಆರಂಭಿಸಿ ಇಂದಿಗೂ ದೇವಾಲಯದ ಉತ್ಸವಗಳಲ್ಲಿ ಪ್ರಧಾನರಾಗಿದ್ದಾರೆ. ಇವರನ್ನು ಸ್ಥಾನಪತಿ, ಸ್ಥಾನತ್ತಾರ್, ಸ್ಥಾನಾಚಾರ್ಯ, ಸ್ಥಾನೀಕ, ಸ್ವಾಮ್ಯ, ಸ್ವಾಮ್ಯಂ ಇತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ನಾಲ್ಕು ಗುರು ಪೀಠಗಳಿಗೆ ತಿರುವನಂತಪುರದಾಸರ್, ಮಾಲಾಕಾರದಾಸರ್, ತಿರುಕ್ಕುರುಂಗುಡಿದಾಸರ್ ಯತಿರಾಜದಾಸರ್ ಎಂಬ ನಾಮಧೇಯವಿದ್ದು, ವರ್ಷದಲ್ಲಿ ನಡೆಯುವ ಎಲ್ಲಾ ಬ್ರಹ್ಮೋತ್ಸವ ಹಾಗೂ ವಿಶೇಷ ಉತ್ಸವಗಳಲ್ಲಿ ಇವರ ಪ್ರಮುಖಪಾತ್ರವಿದೆ. ಖಜಾನೆಯಿಂದ ವಜ್ರಖಚಿತ ವೈರಮುಡಿ,ರಾಜಮುಡಿ, ಕೃಷ್ಣರಾಜಮುಡಿ ಕಿರೀಟಗಳನ್ನು ತಂದು ಉತ್ಸವ ನಿರ್ವಹಿಸುವ ಜವಾಬ್ದಾರಿಯಿದೆ. ದೇವಾಲಯದ ಸ್ಥಾನೀಕರಾಗಿ ಇಂದು ಕರಗಂ, ಕೋವಿಲ್‌ನಂಬಿ, ಯತಿರಾಜದಾಸರ್ ಗುರುಪೀಠಗಳು ಮಾತ್ರ ನಿತ್ಯ ಕೈಂಕರ್ಯ ಮಾಡುತ್ತಾ ಬರುತ್ತಿವೆ.ಭಿಕ್ಷೆ ಸ್ವೀಕರಿಸುತ್ತಿದ್ದ ರಾಮಾನುಜಾಚಾರ್ಯರು:
ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ 12 ವರ್ಷಗಳ ಕಾಲ ವಾಸ್ತವ್ಯವಿದ್ದಾಗ ಈ ನಾಲ್ಕುಮಂದಿ ಸ್ಥಾನಾಚಾರ್ಯರ ಕುಠೀರಗಳಲ್ಲಿ ಮಾತ್ರ ಭಿಕ್ಷೆಸ್ವೀಕರಿಸುತ್ತಿದ್ದರೆಂಬುದು ಐತಿಹಾಸಿಕ ಸತ್ಯವಾಗಿದೆ. ಈ ಕಾರಣಕ್ಕಾಗಿಯೇ ಪ್ರತಿವರ್ಷರಾಮಾನುಜರ ತಿರುನಕ್ಷತ್ರ ಮಹೋತ್ಸವದ ವೇಳೆ ಇದರ ಪ್ರತೀಕವಾಗಿ ಸ್ಥಾನಾಚಾರ್ಯರ ಭಿಕ್ಷಾಕೈಂಕರ್ಯದ ನೇಮಿಸೇವೆಯಿದೆ. ಅಂದು ಸ್ಥಾನಾಚಾರ್ಯರು ಉಪವಾಸವಿದ್ದು ಬಿಕ್ಷಾಕೈಂಕರ್ಯ ಸೇವೆಯನ್ನು ಭಕ್ತಿಯಿಂದ ನೆರವೇರಿಸುತ್ತಾರೆ. ಬಹಳ ಹಿಂದೆ ರಾಮಾನುಜರ ತಿರುನಕ್ಷತ್ರ ಮಹೋತ್ಸವದ ಕಾರ್ಯಕ್ರಮಗಳು ನಾಲ್ಕು ದಿನ ಮಾತ್ರ ನಡೆಯುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಬದಲಾಗಿ 10 ದಿನಗಳಕಾಲ ವೈಭವದಿಂದ ನಡೆಯುತ್ತಾಬಂದಿದೆ.