ಕನ್ನಡಪ್ರಭ ವಾರ್ತೆ ಮೈಸೂರು
ಹಳೆಯ ಐಪಿಸಿ, ಸಿಆರ್ ಪಿಸಿ ಮತ್ತು ಸಾಕ್ಷ್ಯ ಕಾಯಿದೆ ರದ್ದಾಗಿದ್ದು, ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಯಾಗಿದೆ. ಕಾನೂನು ನಿಂತ ನೀರಲ್ಲ, ಬದಲಾವಣೆ ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ತಿಳಿಸಿದರು.ನಗರದ ನಜರ್ ಬಾದ್ ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಸಭಾಂಗಣದಲ್ಲಿ ಪೊಲೀಸ್ ತರಬೇತಿ ಶಾಲೆ ಮತ್ತು ಕೆಪಿಎ ಸಂಯೋಜನೆಯೊಂದಿಗೆ ಸೋಮವಾರ ಆಯೋಜಿಸಿದ್ದ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಜಾಗೃತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
150 ವರ್ಷದ ಹಿಂದಿನ ಕಾನೂನಿಗೆ ಈಗ ಬದಲಾವಣೆಯ ಕಾಲ ಬಂದಿದ್ದು, ಸಾಕಷ್ಟು ಹಳೆಯ ವಿಚಾರಗಳಿಗೊಂದು ಹೊಸ ವಿಚಾರಗಳು ಸೇರ್ಪಡೆಯಾಗಿ ಜಾರಿಯಾಗಿದೆ. ಎಲ್ಲರೂ ಬದಲಾದ ಕಾನೂನನ್ನು ಸಮನ್ವಯದಿಂದ ಅನುಷ್ಠಾನ ಗೊಳಿಸಬೇಕು. ಹೊಸ ಕಾನೂನುಗಳಿಂದ ಸಾಕಷ್ಟು ಬದಲಾವಣೆಯಾಗಿದ್ದು, ಕೆಲ ಅಪರಾಧಗಳಿಗೆ ಕನಿಷ್ಠ ಶಿಕ್ಷೆಯೊಂದಿಗೆ ಗರಿಷ್ಠ ಶಿಕ್ಷೆ ಪ್ರಮಾಣ ವಿಧಿಸಲಾಗಿದೆ. ಅಲ್ಲದೆ, ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದರು.ಹೊಸ ಕಾನೂನಿನ ಬಗ್ಗೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಮತ್ತು ಮಾಧ್ಯಮದವರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಅನವಶ್ಯಕ ವಿಧಿ ನಿಯಮಗಳನ್ನು ಕೈ ಬಿಡಲಾಗಿದೆ:ಜೆಎಸ್ಎಸ್ ಕಾನೂನು ಕಾಲೇಜಿನ ಸಿಇಒ ಪ್ರೊ.ಕೆ.ಎಸ್. ಸುರೇಶ್ ಮಾತನಾಡಿ, 160 ರಿಂದ 170 ವರ್ಷಗಳ ಹಿಂದಿನ ಕಾನೂನನ್ನು ಸ್ವಂತ ಅನುಭವದ ಮೇಲೆ ಬದಲಾವಣೆ ಮಾಡಲಾಗಿದ್ದು, ಈಗ ನೆಲದ ಕಾನೂನಾಗಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಅನಾವಶ್ಯಕ ವಿಧಿ ನಿಯಮಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದರು.
ಈ ಮೊದಲು ಬ್ರಿಟಿಷರು ತಮಗೆ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ಮಾಡಿ ಅನುಷ್ಠಾನಗೊಳಿಸಿದ್ದರು. ಮೊದಲು ರಾಜ್ಯ ದ್ರೋಹ ವಿಚಾರ ಬ್ರಿಟಿಷರಿಗೆ ಆದ್ಯತೆಯಾಗಿದ್ದು, ಹೊಸ ಭಾರತೀಯ ನ್ಯಾಯ ಸಂಹಿತೆಗೆ ಮಹಿಳೆಯರು ಮತ್ತು ಮಕ್ಕಳ ದೌರ್ಜನ್ಯ ತಡೆಯುವುದು ಮೊದಲ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.ಕರ್ನಾಟಕ ಪೊಲೀಸ್ ಅಕಾಡೆಮಿಯ ಪ್ರಭಾರ ನಿರ್ದೇಶಕಿ ಎಂ.ಎಸ್. ಗೀತಾ, ಉಪ ನಿರ್ದೇಶಕ ಎನ್. ನಿರಂಜನ್ ರಾಜ್ ಅರಸ್, ಎಫ್ಎಸ್ಎಲ್ ಉಪ ನಿರ್ದೇಶಕ ಚಂದ್ರಶೇಖರ್, ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಇದ್ದರು.