ಕನ್ನಡಪ್ರಭ ವಾರ್ತೆ ಟೇಕಲ್
ಸೂಕ್ತ ನಿರ್ದೇಶನ ನೀಡುವಂತೆ ಪಂಚಾಯತ್ ರಾಜ್ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದ ಮೇರೆಗೆ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆದು ಬಹುತೇಕ ಸದಸ್ಯರು ನರೇಗಾ ಯೋಜನೆ ಬೇಕು ಎನ್ನುತ್ತಾರೆ ಮತ್ತು ಕೆಲವು ಸದಸ್ಯರು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ರಾಮ್ ಜಿ ಯೋಜನೆಯ ಜಾರಿಗೆ ಬರಲಿ ಎಂಬ ಅಭಿಪ್ರಾಯವು ಚರ್ಚೆಗಳಾಗಿವೆ.ಇನ್ನೂ ಕೆಲವು ಮಂದಿ ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ 100 ದಿನ ಕೆಲಸ ಒದಗಿಸಲಾಗಿತ್ತು. ಹೊಸ ಯೋಜನೆಯಲ್ಲಿ 125 ದಿನಗಳ ಕೆಲಸ ನೀಡುತ್ತಾರೆ ಮತ್ತು ದಿನ ಕೂಲಿಯು ಹೆಚ್ಚಳವಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ವಾರ್ಷಿಕವಾಗಿ 40 ಸಾವಿರಕ್ಕೂ ಹೆಚ್ಚು ಹಣ ದೊರೆಯುತ್ತದೆ ಎನ್ನುತ್ತಾರೆ. ಒಟ್ಟಾರೆ ಈ ವಿಷಯದ ಬಗ್ಗೆ ಗ್ರಾಪಂ ಸದಸ್ಯರು ಕೆಲವು ಕಡೆ ಹೊಸ ಯೋಜನೆಗೆ ಹಸಿರು ನಿಶಾನೆ ಕೊಟ್ಟರೆ ಇನ್ನೂ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಅದರಂತೆಯೇ ಟೇಕಲ್, ಕೆ.ಜಿ.ಹಳ್ಳಿ, ಬನಹಳ್ಳಿ, ಕೊಂಡಶೆಟ್ಟಹಳ್ಳಿ, ಹುಳದೇನಹಳ್ಳಿ, ನೂಟುವೆ, ಚಿಕ್ಕಕುಂತೂರು ಗ್ರಾಪಂಗಳಲ್ಲಿ ಕೆಲವು ಪಿಡಿಒಗಳು ಹಾಗೂ ಪಂಚಾಯಿತಿಯ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಅವರು ಸಹ ಸದಸ್ಯರ ಅಭಿಪ್ರಾಯವನ್ನು ಪಡೆದು ಅಂತಿಮವಾಗಿ ತೀರ್ಮಾನಿಸಲಾಗುತ್ತದೆ ಎಂದು ಇನ್ನೂ ಕೆಲವು ಕಡೆ ಕೆಲವರಿಗೆ ಮಾಹಿತಿ ಕೊರತೆಯಿದ್ದು ಚರ್ಚೆಗೆ ಗ್ರಾಸವಾಗಿದೆ.ಹೊಸ ಯೋಜನೆಯಿಂದ ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಅನುಕೂಲವಾಗುತ್ತದೋ, ಕೂಲಿ ಕಾರ್ಮಿಕರಿಗೆ ಕೆಲಸ ದೊರಕಿಸಿಕೊಳ್ಳಲಾಗುತ್ತದೆಯೋ ಅಥವಾ ಪಂಚಾಯಿತಿಗೆ ಆದಾಯ/ಕೆಲಸ ಸಿಗುವಂತಾಗುತ್ತದೆಯೋ ಎಂಬುದು ಕಾದು ನೋಡಬೇಕಿದೆ. ಒಟ್ಟಾರೆ ಇನ್ನೂ ಅನೇಕ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳಿಗೆ ವಿಕಸಿತ್ ಭಾರತ್ ಬಗ್ಗೆ ಸಂಪೂರ್ಣ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ.