ಕಂಪ್ಲಿ: ರಾಜ್ಯದಲ್ಲಿ ಬಣಜಿಗ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರವರ್ಗ-2ಎ ಅಡಿಯಲ್ಲಿ ಮೀಸಲಾತಿ ಸೌಲಭ್ಯ ನೀಡಲಾಗಿದ್ದು, ಇದೇ ರೀತಿಯ ಮೀಸಲಾತಿಯನ್ನು ಸರ್ಕಾರಿ ಉದ್ಯೋಗಗಳಲ್ಲಿಯೂ ವಿಸ್ತರಿಸಬೇಕು ಎಂದು ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಪ್ರಸಾದ್ ಗಡಾದ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾದ್ ಗಡಾದ್, ಪ್ರಸ್ತುತ ಬಣಜಿಗ ಸಮುದಾಯಕ್ಕೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರವರ್ಗ-3ಎ ಅಡಿಯಲ್ಲಿ ಮೀಸಲಾತಿ ದೊರೆಯುತ್ತಿದೆ. ಆದರೆ, ಶಿಕ್ಷಣದಲ್ಲಿ 2ಎ ಮೀಸಲಾತಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಉದ್ಯೋಗದಲ್ಲಿಯೂ ಅದೇ ವರ್ಗದ ಮೀಸಲಾತಿ ನೀಡುವುದು ನ್ಯಾಯಸಮ್ಮತವಾಗಿದೆ. ಇದರಿಂದ ಸಮುದಾಯದ ಯುವಜನತೆಗೆ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿದ್ದು, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮುದಾಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದರು.
ಬಣಜಿಗ ಸಮುದಾಯದ ಬಹುಪಾಲು ಜನರು ಮಧ್ಯಮ ಮತ್ತು ಬಡ ವರ್ಗಕ್ಕೆ ಸೇರಿದ್ದು, ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅನೇಕ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಏಕರೂಪತೆ ಕಾಯ್ದುಕೊಂಡು ಉದ್ಯೋಗಕ್ಕೂ ಪ್ರವರ್ಗ-2ಎ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.ಮನವಿ ಸಲ್ಲಿಸುವ ಮೊದಲು ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಿಂದ ಬಣಜಿಗ ಸಮುದಾಯದ ಸದಸ್ಯರು ಬೈಕ್ ರ‍್ಯಾಲಿ ನಡೆಸಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ಬಳಿಕ ತಹಸೀಲ್ದಾರ್ ಜೂಗಲ ಮಂಜು ನಾಯಕ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ವಿವರಿಸಿದರು.