ಕನ್ನಡಪ್ರಭ ವಾರ್ತೆ ಕೋಲಾರ
ನಗರ ಸೇರಿ ಗ್ರಾಮೀಣ ಭಾಗದಲ್ಲಿ ನಾಯಿ ಹಾಗೂ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ನಾಯಿ, ಕೋತಿಗಳಿಂದ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.ರಸ್ತೆಗಳಲ್ಲಿ ಬೀದಿ ನಾಯಿಗಳ ಹಿಂಡು ಹೆಚ್ಚಾಗಿದ್ದು, ಒಂಟಿಯಾಗಿ ಓಡಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ. ಬೀದಿ ನಾಯಿಗಳ ಹಾವಳಿಯ ಜತೆಗೆ ಗುಂಪು ಗುಂಪಾಗಿ ಆಗಮಿಸುವ ಕೋತಿಗಳಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಹಲವು ಕಡೆಗಳಲ್ಲಿ ಮಕ್ಕಳು-ಮಹಿಳೆಯರು, ಹಿರಿಯ ನಾಗರಿಕರು ಮನೆಗಳಿಂದ ಹೊರ ಬರುವುದಕ್ಕೂ ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಕ್ರಮೇಣ ಏರಿಕೆಯಾಗುತ್ತಿದ್ದು, ಯಾವ ರಸ್ತೆಗಳಲ್ಲಿ ನೋಡಿದರೂ ನಾಯಿಗಳ ಹಿಂಡು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತಿದೆ. ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ ಮಲಗಿರುತ್ತವೆ. ಅಲ್ಲದೆ ಕಿತ್ತಾಡಿಕೊಂಡು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಅಡ್ಡಲಾಗಿ ಬರುವುದರಿಂದ ಅಪಘಾತಗಳಾಗಿ ದ್ವಿಚಕ್ರವಾಹನ ಸವಾರರು ಕೈಕಾಲು ಮುರಿದುಕೊಂಡು ಆಸ್ಪತ್ರೆಗಳಿಗೆ ದಾಖಲಾಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ರಾತ್ರಿ ವೇಳೆಯಂತೂ ದ್ವಿಚಕ್ರ ವಾಹನ, ಕಾರು ಸೇರಿ ಯಾವ ವಾಹನಗಳು ಕಂಡರೂ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತಿವೆ. ಕಾರು, ಟೆಂಪೋಗಳಂತಹ ಬೃಹತ್ ವಾಹನ ಸವಾರರಿಗೆ ನಾಯಿಗಳಿಂದ ತೊಂದರೆಯಾಗುತ್ತಿಲ್ಲವಾದರೂ ದ್ವಿಚಕ್ರ ವಾಹನಗಳ ಸವಾರರಿಗೆ ನಾಯಿಗಳ ಹಾವಳಿ ತೀವ್ರ ತಲೆನೋವಾಗಿ ಪರಿಣಮಿಸಿದೆ.ಕೋತಿಗಳ ಹಾವಳಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ಮಹಿಳೆಯರು-ಮಕ್ಕಳು ನಿತ್ಯವೂ ತೊಂದರೆ ಅನುಭವಿಸುವುದನ್ನು ನೋಡಲಾಗದೆ, ಸಮಸ್ಯೆ ಬಗೆಹರಿಸಿಕೊಡುವಂತೆ ಅನೇಕ ಮಂದಿ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂಬುದು ಸಾರ್ವಜನಿಕರ ಆರೋಪವಾಗಿದೆ.
ಇನ್ನು ನಗರದ ಕ್ಲಾಕ್‌ಟವರ್ ಹಾಗೂ ಅಮ್ಮವಾರಿಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ಮಾಂಸದ ಅಂಗಡಿ ಮಾಲೀಕರು ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಬಿಸಾಡುವುದರಿಂದ ಮಾಂಸದ ತ್ಯಾಜ್ಯಗಳನ್ನು ತಿನ್ನಲು ಬೀದಿ ನಾಯಿಗಳ ಹಾವಳಿಯಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಓಡಾಡಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.‘ಅನಧಿಕೃತ ಮಾಂಸದಂಗಡಿಗಳು, ಎಲ್ಲೆಂದರಲ್ಲಿ ಹಾಕುವ ಮಾಂಸದ ತ್ಯಾಜ್ಯದಿಂದಲೇ ಕೋಲಾರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸಲು ಪಶುಪಾಲನಾ ಇಲಾಖೆಯವರು ಒಂದು ಶೆಡ್ ನಿರ್ಮಿಸಿಕೊಡುವಂತೆ ಕೇಳಿದ್ದರೂ ಈವರೆಗೂ ನಗರಸಭೆಯಿಂದ ನೀಡಲಾಗಿಲ್ಲ. ನಗರಸಭೆಯ ಜಾಗ ಸಾಕಷ್ಟು ಕಡೆಯಿದ್ದು, ನಿರ್ಮಿಸಿಕೊಟ್ಟರೆ ಅನುಕೂಲವಾಗಲಿದೆ.’
ವಡಗೂರು ರಾಕೇಶ್, ಕೋಲಾರ ನಗರಸಭೆ ಸದಸ್ಯ.