ಕಳೆದೆರಡು ದಿನಗಳ ಹಿಂದೆ ಚನ್ನಗಿರಿ ಮತ್ತು ಹೊಳಲ್ಕೆರೆ ತಾಲೂಕಿನ ಗಡಿ ಗ್ರಾಮವಾದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಕರಡಿಯೊಂದು ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
- ಹಿರೇಎಮ್ಮಿಗನೂರಲ್ಲಿ ರೈತನ ಮೇಲೆ ಕರಡಿ ದಾಳಿ । ಆನೆ ಕಂದಕ ತೋಡಲು ಸರ್ಕಾರಕ್ಕೆ ಪ್ರಸ್ತಾವನೆ: ವಲಯ ಅರಣ್ಯಾಧಿಕಾರಿ
- - -
ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕಳೆದೆರಡು ದಿನಗಳ ಹಿಂದೆ ಚನ್ನಗಿರಿ ಮತ್ತು ಹೊಳಲ್ಕೆರೆ ತಾಲೂಕಿನ ಗಡಿ ಗ್ರಾಮವಾದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಕರಡಿಯೊಂದು ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚನ್ನಗಿರಿ ತಾಲೂಕು ಮಲೆನಾಡಿನ ಸೆರಗಿನಲ್ಲಿದ್ದು 10-15 ವರ್ಷಗಳಿಂದ ಕೆಲವು ಕಾಡು ಪ್ರಾಣಿಗಳು ಜನವಸತಿ ಪ್ರದೇಶದ ಗ್ರಾಮಗಳಿಗೆ ನುಗ್ಗುತ್ತ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಮಾಡುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಹಿರೇಎಮ್ಮಿಗನೂರಲ್ಲಿ ರೈತ ಮೇಲೆ ಕರಡಿ ದಾಳಿ ನಡೆದಿದೆ.
ಚಿರತೆ, ಕಾಡಾನೆ ಕಾಟ:
ಸೂಳೆಕೆರೆಯ ಮೀನುಗಾರಿಕಾ ಕೇಂದ್ರ ಮತ್ತು ಭದ್ರಾ ನಾಲೆಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೋಟಕ್ಕೆ ಹೋಗುತ್ತಿದ್ದ ಇಬ್ಬರು ರೈತರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಕೆಲವು ದಿನಗಳ ನಂತರ ನ.23ರ ಸೋಮವಾರ ಉಬ್ರಾಣಿ ಗ್ರಾಮದಲ್ಲಿನ ರೈತರಾದ ಮಂಜಪ್ಪ ಮತ್ತು ಆಂಜನೇಯ ಎಂಬವರು ನೀರು ಹರಿಸಲು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಕೆರೆ ಪಕ್ಕದ ಶ್ರೀ ಬಸವೇಶ್ವರ ದೇವಾಲಯ ಪಕ್ಕದಲ್ಲಿ ನಿಂತಿದ್ದ ಕಾಡಾನೆ ದಾಳಿ ನಡೆಸಲು ಬಂದಾಗ ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ವೇಗವಾಗಿ ಚಲಾಯಿಸಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ಹೀಗೆ ತಾಲೂಕಿನ ವಿವಿಧೆಡೆ ಕರಡಿ, ಚಿರತೆ, ಆನೆಗಳು ಕಾಡಿನಿಂದ ನಾಡಿಗೆ ನುಗ್ಗುತ್ತಿವೆ. ರೈತಾಪಿ ಜನರು ಹೊಲ, ಗದ್ದೆ, ತೋಟಗಳಿಗೆ ಸಂಚರಿಸಲು ಭಯ ಪಡುತ್ತಿದ್ದಾರೆ. ತಾಲೂಕಿನಲ್ಲಿ ಚನ್ನಗಿರಿ ಮತ್ತು ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶಗಳಿವೆ. ಚನ್ನಗಿರಿ ವಲಯ ಅರಣ್ಯ ಪ್ರದೇಶವು 60 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹರಡಿದ್ದರೆ, ಮಾವಿನಕಟ್ಟೆ ಅರಣ್ಯ ಪ್ರದೇಶವು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಎರಡು ಅರಣ್ಯ ಪ್ರದೇಶಗಳು ಭದ್ರಾ ಅಭಯಾರಣ್ಯಕ್ಕೆ ಸಂಪರ್ಕವನ್ನು ಹೊಂದಿವೆ. ಭದ್ರಾ ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು, ಆಹಾರ ಸಿಗದೇ ಇದ್ದ ಸಂದರ್ಭದಲ್ಲಿ ತಾಲೂಕಿನ ಈ ಎರಡು ವಲಯ ಅರಣ್ಯ ಪ್ರದೇಶಗಳಿಗೆ ನುಗ್ಗುತ್ತವೆ ಎಂದು ನಿವೃತ್ತ ವಲಯ ಸಂರಕ್ಷಣಾಧಿಕಾರಿ ವೀರೇಶ್ ನಾಯ್ಕ್ ಹೇಳುತ್ತಾರೆ.
ಚನ್ನಗಿರಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೇಳುವಂತೆ, ಉಬ್ರಾಣಿ ಮತ್ತು ಮಾವಿನಕಟ್ಟೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳು ವಸತಿ ಪ್ರದೇಶಕ್ಕೆ ಬಾರದಂತೆ ಆಳವಾದ ಕಂದಕಗಳನ್ನು ಈ ಹಿಂದೆ ತೋಡಲಾಗಿತ್ತು. ಆ ಕಂದಕಗಳು ಈಗ ಹೂಳು ತುಂಬಿಕೊಂಡಿವೆ. ಇದರಿಂದ ಕಾಡು ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ಸಂಚರಿಸಲು ಕಾರಣವಾಗಿದೆ. ಈ ಹಿನ್ನೆಲೆ ಆನೆ ಕಂದಕವನ್ನು ತೋಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಚಿರತೆ ಹಿಡಿಯಲು ಬೋನು:
ಮಂಗಳವಾರ ಬೆಳಗ್ಗೆಯಿಂದ ನಲ್ಲೂರು ಬಳಿಯ ಅಡಕೆ ತೋಟದಲ್ಲಿ ಚಿರತೆ ಕಾಣಿಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಲಷ್ಕರ್ ನಾಯ್ಕ್ ಡಿ.ಚೌವಾಣ್ ಅವರನ್ನು ಕನ್ನಡಪ್ರಭ ವಿಚಾರಿಸಿದಾಗ, ಇದೊಂದು ಎ.ಐ. ತಂತ್ರಜ್ಞಾನದ ಚಿತ್ರವಾಗಿದೆ. ಈ ತರಹದ ಚಿರತೆ ನಮ್ಮ ದೇಶದ್ದಲ್ಲ. ಇದೊಂದು ಅನ್ಯದೇಶದ ಚೀತಾ ಎಂದು ಕರೆಯುವ ಪ್ರಾಣಿಯದು. ಈ ಬಗ್ಗೆ ನಾಗರೀಕರು ಭಯ ಪಡುವ ಅಗತ್ಯವಿಲ್ಲ. ಆತಂಕವಿರುವೆಡೆ ಆಯಾ ಕಟ್ಟಿನ ಸ್ಥಳಗಳಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ಗಳನ್ನು ಅಳವಡಿಸಲಾಗಿದೆ. ನಮ್ಮ ಸಿಬ್ಬಂದಿ ಸದಾ ಜಾಗೃತರಾಗಿರುತ್ತಾರೆ ಎಂದು ಭರವಸೆ ನೀಡಿದ್ದಾರೆ.
ಚನ್ನಗಿರಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಚಿರತೆ, ಕರಡಿ, ಆನೆ, ಕಾಡು ಹಂದಿಗಳು ತಿರುಗಾಡುತ್ತಿವೆ. ಆದ್ದರಿಂದ ರೈತರು, ಕೂಲಿ ಕಾರ್ಮಿಕರು ಹೊಲ, ಗದ್ದೆ, ತೋಟಗಳಿಗೆ ಒಂಟಿಯಾಗಿ ಹೋಗಬಾರದು. ಈ ಬಗ್ಗೆ ಅರಣ್ಯ ಇಲಾಖೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರ ಮಾಡಲಾಗಿದೆ ಎಂದೂ ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.